ನಿಮ್ಮ ಖಾತೆಗೆ ಇದ್ದಕ್ಕಿದ್ದಂತೆ ಕೋಟಿ ಕೋಟಿ ಹಣ ಬಂದ್ರೆ ಹೇಗಾಗುತ್ತೆ ? ಯಾರಿಗೂ ಹೇಳದೇ ಸುಮ್ಮನಿರ್ತೀರಾ ? ಆದ್ರೆ ಆ ವ್ಯಕ್ತಿಗೇ ಈ ಬಗ್ಗೆ ಶಾಕ್ ಆಗಿದ್ದು ಐಟಿ, ಪೋಲೀಸ್ ಸೇರಿದಂತೆ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಇದ್ರಿಂದಾಗಿ ಆ ವ್ಯಕ್ತಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಕೋಟಿ ಕೋಟಿ ಹಣ ಬಂದಿರುವ ಖಾತೆ ಅಸಲಿಗೆ ಆ ವ್ಯಕ್ತಿಯದ್ದೇ ಅಲ್ಲ.
ಉತ್ತರಪ್ರದೇಶದ ತರಕಾರಿ ಮಾರಾಟಗಾರ ವಿಜಯ್ ರಸ್ತೋಗಿಯವರ ಬ್ಯಾಂಕ್ ಖಾತೆಗೆ 172 ಕೋಟಿ ರೂಪಾಯಿ (23 ಮಿಲಿಯನ್ ಡಾಲರ್ ಗಿಂತ ಹೆಚ್ಚು) ಹಣ ಬಂದಿದೆ. ಈ ಘಟನೆಯ ಕುರಿತು ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಭವಿಸಿದಾಗಿನಿಂದ ರಸ್ತೋಗಿ ಮತ್ತು ಅವರ ಕುಟುಂಬ ತೀವ್ರ ಒತ್ತಡದಲ್ಲಿದ್ದಾರೆ.
ಬ್ಯಾಂಕ್ ಖಾತೆ ತನಗೆ ಸೇರಿದ್ದಲ್ಲ ಎಂದು ರಸ್ತೋಗಿ ಹೇಳಿಕೊಂಡಿದ್ದು, ಖಾತೆ ತೆರೆಯಲು ಯಾರೋ ತನ್ನ ಪ್ಯಾನ್ ಸಂಖ್ಯೆ ಮತ್ತು ಇತರ ವಿವರಗಳನ್ನು ಬಳಸಿರಬಹುದು ಎಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ರಸ್ತೋಗಿ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಆಗಾಗ ಭೇಟಿ ನೀಡುತ್ತಿದ್ದಾರೆ.
ರಸ್ತೋಗಿ ಅವರ ಖಾತೆಗೆ ಇಷ್ಟು ದೊಡ್ಡ ಮೊತ್ತ ಹೇಗೆ ಜಮೆಯಾಗಿದೆ ಎಂಬುದನ್ನು ನಿರ್ಧರಿಸಲು ಐಟಿ ಇಲಾಖೆ ಡಿಜಿಟಲ್ ಹಣ ವರ್ಗಾವಣೆ ಏಜೆನ್ಸಿಯನ್ನು ತನಿಖೆ ನಡೆಸುತ್ತಿದೆ. ಖಾತೆ ತನಗೆ ಸೇರಿದ್ದಲ್ಲ ಎಂಬ ರಸ್ತೋಗಿ ಹೇಳಿಕೆಯನ್ನೂ ಇಲಾಖೆ ಪರಿಶೀಲಿಸುತ್ತಿದೆ. ಒಂದು ತಿಂಗಳ ಹಿಂದೆ ಐಟಿ ಅಧಿಕಾರಿಗಳು ರಸ್ತೋಗಿ ಅವರ ಹೆಸರು ಸೇರಿದಂತೆ ಅಕ್ರಮ ಹಣ ವರ್ಗಾವಣೆಯ ಪಟ್ಟಿಯನ್ನು ಸ್ವೀಕರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸೈಬರ್ ಕ್ರೈಂ ಸೆಲ್‌ಗೆ ವರ್ಗಾಯಿಸಲಾಗಿದೆ.