ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈಗ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರಾಗಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ತಾವು ಪಡೆಯುವ ಸಂಬಳವನ್ನು ಬಡ ರೈತರ ಹೆಣ್ಣು ಮಕ್ಕಳಿಗೆ ನೀಡುವುದಾಗಿ ಹರ್ಭಜನ್ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಭಜ್ಜಿ, ವೇತನವನ್ನು ರೈತರ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ನೀಡುವುದಾಗಿ ಹೇಳಿದ್ದಾರೆ. ನನ್ನ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ನಾನು ರಾಜಕೀಯಕ್ಕೆ ಸೇರಿದ್ದೇನೆ, ಮತ್ತು ನನ್ನಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನೂ ಮಾಡುತ್ತೇನೆ ಅಂತ ಭರವಸೆ ಕೊಟ್ಟಿದ್ದಾರೆ. ಹರ್ಭಜನ್ ಸಿಂಗ್, ಪಂಜಾಬ್‌ನಿಂದ ಎಎಪಿಯ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದಾಗ ಬಹಳಷ್ಟು ಸವಾಲುಗಳೆದ್ದಿದ್ದವು.
ಹೋರಾಟಕ್ಕಿಳಿದಿದ್ದ ಪಂಜಾಬ್ ರೈತರಿಗೆ ಭಜ್ಜಿ ಬಹಿರಂಗವಾಗಿ ಬೆಂಬಲ ನೀಡಿಲ್ಲ ಎಂಬ ಆರೋಪವಿತ್ತು. ಹರ್ಭಜನ್ ಸಿಂಗ್ ಕಳೆದ ಡಿಸೆಂಬರ್ 24ರಂದು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಇದಾದ ನಂತರ ಕಾಂಗ್ರೆಸ್ ಅಥವಾ ಬಿಜೆಪಿಗೆ ಹರ್ಭಜನ್ ಸೇರಬಹುದು ಎಂಬ ಊಹಾಪೋಹಗಳಿದ್ದವು. ಆದ್ರೆ ಭಜ್ಜಿ ಆಮ್ ಆದ್ಮಿ ಪಕ್ಷವನ್ನು ಸೇರಿದ್ದಾರೆ.
ಹರ್ಭಜನ್ ಸಿಂಗ್ ಅವರನ್ನು ಸುದೀರ್ಘ 23 ವರ್ಷಗಳ ಕ್ರಿಕೆಟ್ ಬದುಕು. ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲೊಬ್ಬರಾಗಿದ್ದ ಭಜ್ಜಿ, 2011ರ ವಿಶ್ವಕಪ್‌ನಲ್ಲಿ 9 ವಿಕೆಟ್ ಹಾಗೂ 2007ರ ಟಿ20 ವಿಶ್ವಕಪ್‌ನಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದ್ದರು.