ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬೆಳಗ್ಗೆಯಿಂದ ಬಿರುಸಿನ ಮತದಾನ ಸಾಗಿದ್ದು, ಶಾಸಕರುಗಳು ವಿಧಾನಸಭೆಯಲ್ಲಿ ತಮ್ಮ ಮತ ಚಲಾಯಿಸುತ್ತಿದ್ದಾರೆ. ಅಡ್ಡ ಮತದಾನದ ಭೀತಿ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳ ನಾಯಕರು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು ಯಾರು ಯಾರಿಗೆ ಮೊದಲ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ನೀಡಬೇಕೆಂದು ಸೂಚನೆ ನೀಡುತ್ತಿದ್ದಾರೆ.
ಇದರ ಮಧ್ಯೆ ಮತದಾನ ಮಾಡಲು ಬಂದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ತಾವು ಯಾರಿಗೆ ಮತ ಚಲಾಯಿಸಿದ್ದೇನೆ ಎಂಬುದರ ಮಾಹಿತಿ ನೀಡಿದ್ದಾರೆ. ನಾನು ಈಗಾಗಲೇ ಕಾಂಗ್ರೆಸ್ ಪಕ್ಷದ ಸಹ ಸದಸ್ಯನಾಗಿ ಗುರುತಿಸಿಕೊಂಡಿದ್ದೇನೆ. ಅಲ್ಲದೇ ಇತ್ತೀಚಿಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ನಿನ್ನೆಯವರೆಗೂ ನಾನು ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದು, ಆದರೆ ಇಂದು ಕಾರ್ಯನಿಮಿತ್ತ ಹೊರ ಹೋದ ಕಾರಣ ಬೆಳಿಗ್ಗೆ ಬರಲಾಗಲಿಲ್ಲ. ಈಗ ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕರನ್ನು ಭೇಟಿಯಾಗಿ ಬಳಿಕ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುತ್ತೇನೆ ಎಂದರು. ತಮ್ಮ ತಂದೆ ಬಚ್ಚೇಗೌಡರಿಂದ ಬಿಜೆಪಿ ಗೆ ಮತ ಚಲಾಯಿಸುವಂತೆ ಯಾವುದೇ ಒತ್ತಡ ಬಂದಿಲ್ಲ ಎಂದು ಅವರು ಹೇಳಿದರು.