ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿಯವರಾದ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ನಲ್ಲಿ ನೆನ್ನೆ ಸಂಜೆ ರೂಂ ಬುಕ್ ಮಾಡಿ ರೂಮ್ ನಲ್ಲಿ ತಂಗಿದ್ದರು. ತಾವು ಆತ್ಮಹತ್ಯೆಗೆ ಶರಣಾಗುವುದಾಗಿ ರಾತ್ರಿ 11:30 ಕ್ಕೆ ಅವರ ಸ್ನೇಹಿತರಿಗೆ ವಾಟ್ಸಾಪ್ ಸಂದೇಶ ರವಾನಿಸಿದ್ದರು. ಆತ್ಮಹತ್ಯೆಗೆ ಶರಣಾಗಿರುವ ಸಂತೋಷ್ ಅವರ ದೇಹವನ್ನು ಇದೀಗ ವಿಧಿವಿಜ್ಞಾನ ಪ್ರಯೋಗಾಲಯದವರು ಪರೀಕ್ಷೆ ನಡೆಸುತ್ತಿದ್ದಾರೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬಗ್ಗೆ ಅವರ ಪತ್ನಿ ಜಯಶ್ರೀ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೂರು ವರ್ಷಗಳ ಹಿಂದಷ್ಟೇ ತಾವು ಸಂತೋಷ್ ಅವರನ್ನು ವಿವಾಹವಾಗಿದ್ದು ತಮಗೆ ಎರಡು ವರ್ಷದ ಮಗು ಇದೆ ಎಂದು ಅವರು ತಿಳಿಸಿದ್ದಾರೆ. ತಮ್ಮ ಪತಿಯ ಆತ್ಮಹತ್ಯೆಗೆ ಈಶ್ವರಪ್ಪನವರೇ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಹಣ ಮಂಜೂರು ಮಾಡಲು ಸಚಿವ ಈಶ್ವರಪ್ಪನವರು 40 ಪರ್ಸೆಂಟ್ ಲಂಚದ ಬೇಡಿಕೆ ಇಟ್ಟಿದ್ದರು. ತಮ್ಮ ಪತಿ ಹಣ ಮಂಜೂರು ಮಾಡಿಸಿಕೊಳ್ಳಲು 6 ದಿನಗಳವರೆಗೂ ಶಿವಮೊಗ್ಗದಲ್ಲಿ ತಂಗಿದ್ದರು. ಆದರೂ ಸಹ ಹಣ ಬರಲಿಲ್ಲ ಎಂದಿದ್ದಾರೆ.
ಆದರೆ ಇದೀಗ ಸಚಿವ ಈಶ್ವರಪ್ಪನವರು ಸಂತೋಷ್ ಯಾರೆಂಬುದೇ ನನಗೆ ತಿಳಿದಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಬಳಿ ಈಶ್ವರಪ್ಪನವರು ಸಂತೋಷ್ ಜೊತೆ ಇರುವ ಭಾವಚಿತ್ರವಿದೆ ಎಂದು ಅವರು ತಿಳಿಸಿದ್ದಾರೆ.