ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿರುವ ಜೆಡಿಎಸ್, ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಇದರ ಮಧ್ಯೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದ್ದು, ಪಕ್ಷದ ವರಿಷ್ಠರ ತಲೆ ನೋವಿಗೆ ಕಾರಣವಾಗಿದೆ.
ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಸಚಿವ ಎಚ್.ಡಿ. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಆಕಾಂಕ್ಷಿಗಳಾಗಿದ್ದು, ಇಬ್ಬರೂ ಕೂಡ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸ್ವರೂಪ್ ಅವರಿಗೆ ಟಿಕೆಟ್ ಕೊಡಲು ಒಲವು ಹೊಂದಿದ್ದು, ಆದರೆ ಭವಾನಿ ಅವರಿಗೆ ಟಿಕೆಟ್ ನೀಡುವಂತೆ ರೇವಣ್ಣ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇದರ ಮಧ್ಯೆ ಹಾಸನ ಕ್ಷೇತ್ರದಲ್ಲಿ ಹಾಕಲಾಗಿರುವ ಜೆಡಿಎಸ್ ಅಭ್ಯರ್ಥಿಗಳ ಪೋಸ್ಟರ್ ನಲ್ಲಿ ಭವಾನಿ ರೇವಣ್ಣ ಅವರ ಭಾವಚಿತ್ರವಿದ್ದು, ಎರಡನೇ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲದರ ನಡುವೆಯೂ ಭವಾನಿಯವರ ಭಾವಚಿತ್ರ ಕಾರ್ಯಕರ್ತರಲ್ಲಿ ಗೊಂದಲ ಮೂಡಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಮಂಗಳವಾರದಂದು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರನ್ನು ಕರೆಸಿಕೊಂಡು ಪ್ರತ್ಯೇಕವಾಗಿ ಮಾತನಾಡಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕುರಿತಂತೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾವುದೇ ಒತ್ತಡ ತಂತ್ರಗಳಿಗೆ ಅಥವಾ ಬೆದರಿಕೆಗೆ ತಲೆಬಾಗುವುದಿಲ್ಲ ಎನ್ನುವ ಮೂಲಕ ಸ್ವರೂಪ್ ಅವರಿಗೇ ಟಿಕೆಟ್ ನೀಡುವ ಸುಳಿವನ್ನು ಪರೋಕ್ಷವಾಗಿ ನೀಡಿದ್ದಾರೆ. ಆದರೆ ಟಿಕೆಟ್ ಘೋಷಣೆಯಾದ ಬಳಿಕ ಇದು ಕುಟುಂಬ ಕಲಹಕ್ಕೆ ಕಾರಣವಾಗಬಹುದಾ ಎಂಬ ಅನುಮಾನ ಹಲವರನ್ನು ಕಾಡುತ್ತಿದೆ.