ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣವೆಸಗಿ ಒಂದು ತಿಂಗಳು ಕಳೆದಿವೆ. ಉಕ್ರೇನ್‍ನ ಎಲ್ಲೆಡೆ ಶೆಲ್‌ಗಳು, ಬಾಂಬುಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದೆ. ರಷ್ಯಾದ ಕ್ಷಿಪಣಿಗಳು ಕಟ್ಟಡಗಳು, ಸ್ಮಾರಕಗಳು ಮತ್ತು ಶಾಲೆಗಳ ಮೇಲೆ ದಾಳಿ ಮಾಡಿವೆ.
ಮಾರಣಾಂತಿಕ ಆಕ್ರಮಣವನ್ನು ರಷ್ಯಾ ಮುಂದುವರೆಸುತ್ತಿರುವುದರಿಂದ ಲಕ್ಷಾಂತರ ನಾಗರಿಕರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ನಂತರ ಒಂದು ತಿಂಗಳ ಹಿಂದೆ ಪ್ರಾರಂಭವಾದ ಯುದ್ಧವು ಇದುವರೆಗೆ 1,000 ಕ್ಕೂ ಹೆಚ್ಚು ಕಟ್ಟಡಗಳನ್ನು ನಾಶಪಡಿಸಿದೆ. ಹಲವಾರು ನಾಗರಿಕರು ಮೃತಪಟ್ಟಿದ್ದಾರೆ.
ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಪ್ರಕಾರ, ರಷ್ಯಾದ ಆಕ್ರಮಣದಿಂದಾಗಿ ಹತ್ತು ದಶಲಕ್ಷಕ್ಕೂ ಹೆಚ್ಚು ಜನರು ಈಗ ಉಕ್ರೇನ್‌ನಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ. ಈ ಹತ್ತು ಮಿಲಿಯನ್ ಜನರಲ್ಲಿ, ಕನಿಷ್ಠ 3.8 ಮಿಲಿಯನ್ ಜನರು ನೆರೆಯ ದೇಶಗಳಿಗೆ ಪಲಾಯನಗೈದಿದ್ದರೆ, 6.5 ಮಿಲಿಯನ್ ಜನರು ಉಕ್ರೇನ್ ನಲ್ಲೇ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ.
ತಮ್ಮ ಮನೆಗಳನ್ನು, ಪ್ರೀತಿಪಾತ್ರರನ್ನು ಮತ್ತು ವಸ್ತುಗಳನ್ನು ಮುಂತಾದವುಗಳನ್ನು ಬಿಟ್ಟು ಜನರು ಪಲಾಯನ ಮಾಡುತ್ತಿದ್ದಾರೆ. ಯುದ್ಧದಿಂದಾಗಿ ಮನುಷ್ಯರಷ್ಟೇ ಅಲ್ಲ ಸಾಕುಪ್ರಾಣಿಗಳ ಪರಿಸ್ಥಿತಿ ಕೂಡ ಭೀಕರವಾಗಿದೆ. ಸಾಕುಪ್ರಾಣಿಗಳನ್ನು ಮಾತ್ರ ತಮ್ಮ ಜೊತೆಗೆ ಒಯ್ಯುತ್ತಿದ್ದಾರೆ. ಯುದ್ಧದಿಂದ ತಮ್ಮ ಜೀವನಕ್ಕೆ ಏನೆಂಬ ಗೊತ್ತು ಗೊರಿಯಿಲ್ಲದಿದ್ರೂ, ತಮ್ಮ ಮಾನವೀಯತೆಯನ್ನು ಅವರು ಮೆರೆಯುತ್ತಿದ್ದಾರೆ.
ಉಕ್ರೇನ್ ನಿಂದ ಬಂದ ಫೋಟೋಗಳಲ್ಲಿ ನಾಗರಿಕರು ತಮ್ಮ ಸಾಕುಪ್ರಾಣಿಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ತೋರಿಸುತ್ತವೆ. ರೈಲು, ಬಸ್ಸು, ಕಾಲ್ನಡಿಗೆ ಮುಖಾಂತರ ಸಾಕುಪ್ರಾಣಿಗಳನ್ನು ಕೂಡ ತಮ್ಮ ಜೊತೆ ಕರೆದೊಯ್ಯುತ್ತಿದ್ದಾರೆ.
ಮನುಷ್ಯರು ಮತ್ತು ಸಾಕುಪ್ರಾಣಿಗಳ ನಡುವಿನ ಬಾಂಧವ್ಯವನ್ನು ತೋರಿಸುವ ಚಿತ್ರಗಳು ವೈರಲ್ ಆಗುತ್ತಿವೆ. ಆದರೆ, ಯುದ್ಧದಿಂದ ಹಾನಿಗೊಳಗಾದ ಉಕ್ರೇನ್ ನ ಪರಿಸ್ಥಿತಿ ನೋಡಿದ್ರೆ ಹೃದಯ ಭಾರವಾಗುತ್ತದೆ.