ದಂತಕಥೆ, ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಯುಗಾಂತ್ಯವಾಗಿದ್ದು, ಅಭಿಮಾನಿಗಳು ಅಶ್ರುತರ್ಪಣ ಹರಿಸಿದ್ದಾರೆ. ಕಳೆದ ಎಂಟು ದಶಕಗಳಿಂದ ಗಾಯನದ ಸಾಮ್ರಾಜ್ಯವನ್ನು ಆಳಿದ ಗಾಯಕಿ ಇನ್ನಿಲ್ಲ ಎಂಬ ಕೊರಗು ಅಭಿಮಾನಿಗಳದ್ದಾಗಿದೆ. ಮಧ್ಯಪ್ರದೇಶ ಮೂಲದವರಾದ ಇವರು ಭಾರತದ ಹಲವಾರು ಭಾಷೆಗಳಲ್ಲಿ ಹಾಡು ಹಾಡಿದ್ದಾರೆ.
ಲತಾ ಮಂಗೇಶ್ಕರ್ ಅವರು ಹಾಡಿರುವ ತಮಿಳು ಹಾಡೊಂದರ ಬಗ್ಗೆ ಸಂಗೀತ ನಿರ್ದೇಶಕ ಇಳಯರಾಜ ಅವರು ಇಂಟ್ರೆಸ್ಟಿಂಗ್ ವಿಚಾರದ ಬಗ್ಗೆ ಬೆಳಕು ಚೆಲ್ಲಿದ್ದಾರೆ. 1988ರ ಸತ್ಯ ಚಲನಚಿತ್ರದ ವಾಲಯೋಸಾಯಿ ಕಾಲಾ ಕಲವೇನಾ ಹಾಡನ್ನು ಎಸ್ಪಿಬಿ ಅವರ ಜೊತೆ ಹಾಡಿದ್ದರು. ಚಿತ್ರದಲ್ಲಿ ಕಮಲ್ ಹಾಸನ್ ಹಾಗೂ ಅಮಲಾ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ತಮಿಳು ಬಾರದ ಲತಾ ಮಂಗೇಶ್ಕರ್ ಅವರು ಸಾಹಿತ್ಯವನ್ನು ಓದಿದ ಬಳಿಕ ಹಾಡಲು ಸ್ವಲ್ಪ ಭಯಪಟ್ಟಿದ್ದರಂತೆ. ಆದರೆ, ನಂತರ ಅವರ ಕಂಠದಿಂದ ಅದ್ಭುತವಾಗಿ ಈ ಹಾಡನ್ನು ಒಂದೂ ತಪ್ಪಿಲ್ಲದೆ ಹಾಡಿದ್ದರು.
ಸತ್ಯ ಸಿನಿಮಾಗೆ ಇಳಯರಾಜ ಅವರು ಸಂಗೀತ ನಿರ್ದೇಶಿಸಿದ್ದು, ಲತಾ ಅವರೇ ಈ ಹಾಡನ್ನು ಹಾಡಬೇಕು ಎಂದು ಬಯಸಿದ್ದರು. ಇಂತಹ ಹಾಡನ್ನು ಲತಾ ಮಂಗೇಶ್ಕರ್ ಅವರು ಮಾತ್ರ ಹಾಡಲು ಸಾಧ್ಯ ಎಂದು ಹೇಳಿದ ಇಳಯರಾಜ ಅವರ ಮಾತಿಗೆ ಕಮಲ್ ಹಾಸನ್ ಕೂಡ ಮರು ಮಾತನಾಡದೇ ಒಪ್ಪಿಗೆ ನೀಡಿದ್ದರಂತೆ.
ಹಾಡು ರೆಕಾರ್ಡಿಂಗ್ ಗೆ ಸ್ಟುಡಿಯೋಗೆ ಆಗಮಿಸಿದ ಲತಾ ಮಂಗೇಶ್ಕರ್ ಅವರು ಒಂದೂ ತಪ್ಪಿಲ್ಲದೆ ಸ್ವಚ್ಛಂದವಾಗಿ ಹಾಡಿದ್ದು, ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿದ್ದರು. ತಮಿಳಿನ ಕೆಲ ಕಷ್ಟದ ಪದಗಳನ್ನು ಕೂಡ ಅವರು ಲೀಲಾಜಾಲವಾಗಿ ಹಾಡಿದ್ದು ವಿಶೇಷವಾಗಿತ್ತು. ಈ ಘಟನೆಯನ್ನು ಇಳಯರಾಜ ಅವರು ಮತ್ತೆ ನೆನಪು ಮಾಡಿಕೊಂಡಿದ್ದು, ಅಗಲಿದ ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.