ವೈದ್ಯರು ರೋಗ ನಿರ್ಣಯ ಮಾಡುವಲ್ಲಿ ಅದಕ್ಕೂ ಪೂರ್ವಭಾವಿಯಾಗಿ ಮಾಡಿಸುವ ಪರೀಕ್ಷೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಇದರ ಆಧಾರದ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಪರೀಕ್ಷೆ ನಡೆಸುವ ಡಯಾಗ್ನೋಸ್ಟಿಕ್ ಸೆಂಟರ್ ಗಳು ಕೊಂಚ ಎಡವಟ್ಟು ಮಾಡಿದರೂ ಸಂಬಂಧಪಟ್ಟವರಿಗೆ ತೊಂದರೆ ಸಂಭವಿಸುತ್ತದೆ.
ಇಂಥವುದೇ ಒಂದು ಪ್ರಕರಣದಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ಸ್ಕ್ಯಾನಿಂಗ್ ಮಾಡಿದ್ದ ಡಯಾಗ್ನೋಸ್ಟಿಕ್ ಸೆಂಟರ್ ಒಂದು ಮಗು ಅಸಹಜ ಬೆಳವಣಿಗೆ ಹೊಂದಿದ್ದರೂ ಸಹ ಬೆಳವಣಿಗೆ ಸರಿಯಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದು, ಇದೀಗ ಆ ಡಯಾಗ್ನೋಸ್ಟಿಕ್ ಸೆಂಟರ್ ಗೆ ಗ್ರಾಹಕ ನ್ಯಾಯಾಲಯದಿಂದ ಬರೋಬ್ಬರಿ ಹದಿನೈದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಮದ್ದೂರಿನಲ್ಲಿ ಈ ಘಟನೆ ನಡೆದಿದ್ದು, ಗೊರವನಹಳ್ಳಿ ಗ್ರಾಮದ ಮಹೇಶ್ ಎಂಬವರ ಪತ್ನಿ ಸಿಂಧುಶ್ರೀ ಎರಡನೇ ಬಾರಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಡಿ 2 ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದರು. ಆಗ ಮಗು ಗರ್ಭದಲ್ಲಿ ಅಸಹಜ ಬೆಳವಣಿಗೆ ಹೊಂದಿದ್ದರೂ ಸಹ ಬೆಳವಣಿಗೆ ಸರಿಯಾಗಿದೆ ಎಂದು ತಪ್ಪು ವರದಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಗುವಿನ ತಂದೆ ಮಹೇಶ್, ಡಯಾಗ್ನೋಸ್ಟಿಕ್ ಸೆಂಟರ್ ವಿರುದ್ಧ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ನೀಡಿದ್ದು ಮಗು ಅಸಹಜ ಬೆಳವಣಿಗೆಗೆ ಡಯಾಗ್ನೋಸ್ಟಿಕ್ ಸೆಂಟರ್ ನೀಡಿದ ತಪ್ಪು ವರದಿಯೇ ಕಾರಣ ಎಂದು ಆರೋಪಿಸಿದ್ದರು. ಇದು ಸಾಬೀತಾದ ಹಿನ್ನೆಲೆಯಲ್ಲಿ ಇದೀಗ ಡಯಾಗ್ನೋಸ್ಟಿಕ್ ಸೆಂಟರ್ ಗೆ ದಂಡ ವಿಧಿಸಲಾಗಿದೆ.