ವಿದೇಶದಲ್ಲಿ ಮನೆ ಕೆಲಸಗಾರರಿಗೆ 60,000 ರೂಪಾಯಿಗಳಿಗೂ ಅಧಿಕ ವೇತನ ಸಿಗಲಿದೆ ಎಂಬ ಆಮಿಷ ಒಡ್ಡಿ ಯುವತಿಯರನ್ನು ಕರೆದುಕೊಂಡು ಹೋಗಿ ಬಳಿಕ ಅವರನ್ನು ಐಸಿಸ್ ಉಗ್ರರಿಗೆ ಮಾರಾಟ ಮಾಡಲಾಗುತ್ತಿತ್ತೆಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಈ ಜಾಲದ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಬಂದ ಯುವತಿಯೇ ಈ ಶಾಕಿಂಗ್ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಕೇರಳದಿಂದ ನೂರಕ್ಕೂ ಅಧಿಕ ಯುವತಿಯರನ್ನು ಈಗಾಗಲೇ ಗಲ್ಫ್ ಗೆ ಸಾಗಿಸಿ ಬಳಿಕ ಐಸಿಸ್ ಉಗ್ರರಿಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ಈಗ ಪೊಲೀಸರಿಗೆ ಲಭ್ಯವಾಗಿದೆ.
ಕಣ್ಣೂರು ನಿವಾಸಿಯಾದ ಮಜೀದ್ ಎಂಬಾತ ಕಾಸರಗೋಡು ಭಾಗದವರನ್ನು ಮನೆ ಕೆಲಸದವರ ಸೋಗಿನಲ್ಲಿ ವಿದೇಶಕ್ಕೆ ಸಾಗಿಸಿದ್ದಾನೆ ಎನ್ನಲಾಗಿದ್ದು, ಪ್ರಕರಣದ ಮಾಹಿತಿ ಸಂಗ್ರಹಿಸಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಅಲ್ಲದೆ ಇನ್ನಿಬ್ಬರು ಯುವತಿಯರು ಸಹ ಊರಿಗೆ ಮರಳಿದ್ದಾರೆ ಎನ್ನಲಾಗಿದ್ದು ಅವರನ್ನು ಗುರುತಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.