ಮಧ್ಯಪ್ರದೇಶದ ಸಿದ್ದಿಯಲ್ಲಿ ನಡೆದಿದ್ದ ಮೂತ್ರ ವಿಸರ್ಜನೆ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣದ ಸಂತ್ರಸ್ತ ತನ್ನ ಮೇಲೆ ಮೂತ್ರ ವಿಸರ್ಜಿಸಿದವನನ್ನು ಕ್ಷಮಿಸಲು ಮುಂದಾಗಿದ್ದು, ಆತನನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೋರುವುದಾಗಿ ಹೇಳಿದ್ದಾರೆ.
ಬುಡಕಟ್ಟು ಜನಾಂಗಕ್ಕೆ ಸೇರಿದ್ದ ದಶಮತ್ ರಾವತ್ ಅವರ ಮೇಲೆ ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಎಂಬಾತ ಮೂತ್ರ ವಿಸರ್ಜನೆ ಮಾಡಿದ್ದು, ಇದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅಲ್ಲದೆ ಈ ಪ್ರಕರಣ ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರವೇಶ್ ಶುಕ್ಲಾನನ್ನು ಬಂಧಿಸಿದ್ದ ಪೊಲೀಸರು ಆತನಿಗೆ ಸೇರಿದ ಕಟ್ಟಡವನ್ನು ಬುಲ್ಡೋಜರ್ ಮೂಲಕ ದ್ವಂಸಗೊಳಿಸಿದ್ದರು. ಅಲ್ಲದೆ ಸ್ವತಃ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಸಂತ್ರಸ್ತ ದಶಮತ್ ರಾವತ್ ನನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಕಾಲು ತೊಳೆದು ಕ್ಷಮೆ ಯಾಚಿಸಿದ್ದರು.
ಇದೀಗ ಪ್ರಕರಣದ ಕುರಿತಂತೆ ಮಾತನಾಡಿರುವ ದಶಮತ್ ರಾವತ್, ಪ್ರವೇಶ್ ಶುಕ್ಲಾಗೆ ತನ್ನ ತಪ್ಪಿನ ಅರಿವಾಗಿದೆ. ಹೀಗಾಗಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಕೋರುವುದಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.