ಮೈಸೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಹಲವಾರು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳಿಗೆ ಪಾಠವನ್ನು ಹೇಳಿಕೊಟ್ಟರೆ, ಇಲ್ಲೊಂದೆಡೆ, ತನಗೆ ಕಲಿಸಿದ ಮಗನ ಜೊತೆ ಪರೀಕ್ಷೆಗೆ ಕುಳಿತ ತಂದೆಯೊಬ್ಬರು ಹತ್ತನೇ ತರಗತಿ ತೇರ್ಗಡೆಗೊಂಡಿದ್ದಾರೆ.
ಹೌದು, 28 ವರ್ಷಗಳು ಮತ್ತು ಮೂರು ವಿಫಲ ಪ್ರಯತ್ನಗಳ ನಂತರ, 42 ವರ್ಷದ ರಹಮತ್ ಉಲ್ಲಾ ಅಂತಿಮವಾಗಿ ಫಲಿತಾಂಶ ಪ್ರಕಟವಾದಾಗ ತನ್ನ ಹತ್ತನೇ ತರಗತಿ ಪರೀಕ್ಷೆಯನ್ನು ತೇರ್ಗಡೆ ಮಾಡಿದ್ದರೆ. ಈ ಮೂಲಕ ತನ್ನ ಜೀವಿತಾವಧಿಯ ಕನಸನ್ನು ನನಸು ಮಾಡಿದ್ದಾರೆ. 333 ಅಂಕಗಳೊಂದಿಗೆ ರಹಮತ್ ಪಾಸ್ ಆಗಿದ್ದಾರೆ. ಇವರ ಪುತ್ರ ಮೊಹಮ್ಮದ್ ಫರಾನ್ ಶೇ.98 ಅಂಕ ಗಳಿಸಿದ್ದು, ಇವರ ಖುಷಿಯನ್ನು ಇಮ್ಮಡಿಗೊಳಿಸಿದೆ.
ತನ್ನ ತಂದೆ ಯಾವಾಗಲೂ ತಾನು 10ನೇ ತರಗತಿ ಓದಿ, ಪಾಸ್ ಆಗಬೇಕು ಎಂದು ಒತ್ತಾಯಿಸುತ್ತಿದ್ದರು. ಆದರೆ, ಇದು ಸಾಧ್ಯವಾಗಿರಲಿಲ್ಲ. ಆದರೀಗ ಸುಮಾರು 30 ವರ್ಷಗಳ ನಂತರ, ತನ್ನ ಮಗನ ಕಾರಣದಿಂದಾಗಿ 10ನೇ ತರಗತಿ ಪಾಸ್ ಮಾಡಿರುವುದಾಗಿ ರಹಮತ್ ಆನಂದಭಾಷ್ಪ ಸುರಿಸಿದ್ದಾರೆ.
ಬಟ್ಟೆ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಕೆಲಸ ಮಾಡುವ ಮೈಸೂರಿನ ನಿವಾಸಿ ರಹಮತ್ ಉಲ್ಲಾ ಅವರು, ಹತ್ತನೇ ತರಗತಿ ಪರೀಕ್ಷೆಯನ್ನು ತೇರ್ಗಡೆಗೊಳಿಸುವುದು ತನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.