ಪಿಎಸ್ಐ ನೇಮಕಾತಿ ಅಕ್ರಮದಲ್ಲಿನ ತಮ್ಮ ಪಕ್ಷದವರ ಬಣ್ಣ ಬಯಲಾಗುತ್ತೆ ಎಂಬ ಭಯಕ್ಕೆ ಕಾಂಗ್ರೆಸ್ ಹಿಟ್ & ರನ್ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಆರ್.ಟಿ. ನಗರದ ತಮ್ಮ ಖಾಸಗಿ ನಿವಾಸದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಪ್ರತಿ ಪಕ್ಷ ಸ್ಥಾನದಲ್ಲಿ ಇರುವವರು ಸರ್ಕಾರದ ಮೇಲೆ ಆರೋಪಗಳನ್ನು ಮಾಡುವಾಗ ಸಾಕ್ಷ್ಯಗಳನ್ನು ತೋರಿಸಬೇಕು. ಆದರೆ ಕಾಂಗ್ರೆಸ್ ಕೇವಲ ಹಿಟ್ & ರನ್ ಮಾಡುತ್ತಿದೆ. ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರೇ ಬಂಧನಕ್ಕೊಳಗಾಗಿದ್ದಾರೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಯಾವೆಲ್ಲ ದೂರುಗಳು ಬಂದಿವೆಯೋ ಅವೆಲ್ಲದರ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಬಂಧಿಸುತ್ತೇವೆ ಎಂದು ಹೇಳಿದರು.