ಬರೇಲಿ: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ಆಯ್ಕೆಯ ಪಕ್ಷಕ್ಕೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನು ಮನೆಯಿಂದ ಹೊರ ಹಾಕಿರುವ ವಿಲಕ್ಷಣ ಘಟನೆ ನಡೆದಿದೆ.
ಹೆಂಡತಿಯನ್ನು ಹೊಡೆದು ಮನೆಯಿಂದ ಹೊರಹಾಕಿದ ಆರೋಪದ ಮೇಲೆ ಪತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಪೊಲೀಸರನ್ನು ಒತ್ತಾಯಿಸಿದೆ. 21ರ ಹರೆಯದ ಪತ್ನಿಗೆ ವಿಚ್ಛೇದನ ನೀಡುವುದಾಗಿಯೂ ಪತಿ ಬೆದರಿಕೆ ಹಾಕಿದ್ದಾನೆ. ಪತಿ ವಿರುದ್ಧ ಮಹಿಳೆ ಇನ್ನೂ ಅಧಿಕೃತ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಮಾರ್ಚ್ 11 ರಂದು ಬರೇಲಿಯ ಬರಾದರಿ ಪ್ರದೇಶದಲ್ಲಿ ಮಹಿಳೆಯನ್ನು ಗಂಡ ಮನೆಯಿಂದ ಹೊರಹಾಕಿದ್ದಾನೆ. ತಾನು ಮತ ಹಾಕಿದ ಅಭ್ಯರ್ಥಿಯು ಚುನಾವಣೆಯಲ್ಲಿ ಗೆದ್ದಿದ್ದಕ್ಕೆ ಸಂತೋಷಪಟ್ಟಿದ್ದಕ್ಕೆ ಕೋಪಗೊಂಡ ಗಂಡ ಪತ್ನಿಯನ್ನು ಹೊಡೆದು ಮನೆಯಿಂದ ಹೊರದಬ್ಬಿದ್ದಾನೆ.
ಈ ಸಂಬಂಧ ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು ಮಹಿಳೆಯ ಪತಿ ಮತ್ತು ಆಕೆಯ ಅತ್ತೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯುಪಿ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿದ್ದಾರೆ. ಅಂದಹಾಗೆ, 2021 ರಲ್ಲಿ ಈ ಜೋಡಿ ಪ್ರೇಮ ವಿವಾಹವಾಗಿತ್ತು. ಅಷ್ಟೇ ಅಲ್ಲ ಇವರಿಬ್ಬರೂ ನೆರೆಹೊರೆಯವರಾಗಿದ್ದು ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.