ಪ್ರಧಾನ ನರೇಂದ್ರ ಮೋದಿಯವರು ದಿನಕ್ಕೆ 18 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ ಎಂಬ ಸಂಗತಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇದರ ಮಧ್ಯೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ 2016ರಲ್ಲಿ ನಡೆದಿದ್ದ ಘಟನೆಯೊಂದನ್ನು ಸ್ಮರಿಸಿಕೊಂಡಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ನಲ್ಲಿ ನಡೆದ ‘ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕದ ಕುರಿತಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೈ ಶಂಕರ್, 2016ರಲ್ಲಿ ಆಫ್ಘಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆದ ವೇಳೆ ತಡರಾತ್ರಿ ಮೋದಿಯವರು ಕರೆ ಮಾಡಿ ವಿಚಾರಿಸಿದ ಘಟನೆಯನ್ನು ಹೇಳಿದ್ದಾರೆ.
2016 ರಲ್ಲಿ ಅಫ್ಘಾನಿಸ್ತಾನದ ಮಜರ್ ಇ ಷರೀಫ್ ನಲ್ಲಿರುವ ಭಾರತೀಯ ದೂತಾವಾಸದ ಮೇಲೆ ಮಧ್ಯರಾತ್ರಿಯಲ್ಲಿ ದಾಳಿ ನಡೆದಿದ್ದು, ನಾನು ಅಲ್ಲೇನು ನಡೆಯುತ್ತಿದೆ ಎಂಬುದರ ಕುರಿತು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆಗ ಸ್ವಲ್ಪ ಹೊತ್ತಿನಲ್ಲಿ ನನಗೆ ಕರೆಯೊಂದು ಬಂತು. ಪ್ರಧಾನಿಯವರು ಕರೆ ಮಾಡಿದಾಗ ಕಾಲರ್ ಐಡಿ ಕಾಣಿಸುವುದಿಲ್ಲ. ನಾನು ಕರೆ ಸ್ವೀಕರಿಸಿದ ವೇಳೆ ಎಚ್ಚರವಾಗಿದ್ದೀಯಾ, ಟಿವಿ ನೋಡುತ್ತಿದ್ದೀಯಾ, ಅಲ್ಲೇನು ನಡೆಯುತ್ತಿದೆ ಎಂಬುದರ ಮಾಹಿತಿ ಪಡೆದುಕೊಂಡೆಯಾ ಎಂದು ನರೇಂದ್ರ ಮೋದಿಯವರು ನನ್ನನ್ನು ಕೇಳಿದ್ದರು ಎಂದು ಜೈಶಂಕರ್ ತಿಳಿಸಿದ್ದಾರೆ.