ತಂಬಾಕು ಸೇವನೆ ಹಾನಿಕಾರಕ ಅನ್ನೋದು ಗೊತ್ತಿದ್ದರೂ ಅನೇಕರು ಈ ಚಟಕ್ಕೆ ದಾಸರಾಗಿರುತ್ತಾರೆ. ತಂಬಾಕಿನ ದುಷ್ಪರಿಣಾಮಗಳು ಒಂದೆರಡಲ್ಲ. ಗುಜರಾತ್‌ನಲ್ಲಿ ಬೆಳಕಿಗೆ ಬಂದಿರೋ ಪ್ರಕರಣವೊಂದು ಇದಕ್ಕೆ ಸಾಕ್ಷಿಯಾಗಿದೆ.
ತಂಬಾಕು ವ್ಯಸನಿಯಾಗಿದ್ದ ಮಹಿಳೆಯೊಬ್ಬಳಿಗೆ ಜನಿಸಿದ ಮಗುವಿನ ಮೇಲೆ ಇದರ ದುಷ್ಪರಿಣಾಮ ಕಂಡುಬಂದಿದೆ. ಮಗುವಿನ ಇಡೀ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಮಗುವಿನಲ್ಲಿ ಹೆಚ್ಚಿನ ಪ್ರಮಾಣದ ನಿಕೋಟಿನ್ ಇರುವುದೇ ಇದಕ್ಕೆ ಕಾರಣ ಅನ್ನೋದು ವೈದ್ಯಕೀಯ ವರದಿಗಳಲ್ಲಿ ದೃಢಪಟ್ಟಿದೆ.
ವೈದ್ಯರ ಪ್ರಕಾರ ಮಗುವಿನ ರಕ್ತದಲ್ಲಿ ನಿಕೋಟಿನ್ ಅತಿಯಾದ ಪ್ರಮಾಣದಲ್ಲಿದೆ. ಇದಕ್ಕೆ ಕಾರಣ ತಂಬಾಕು ತಿನ್ನುವ ತಾಯಿಯ ಅಭ್ಯಾಸ. ಜನನದ ನಂತರ ಶಿಶುವಿನಲ್ಲಿ ನಿಕೋಟಿನ್ ಮಟ್ಟವು 60 ng/ml ಆಗಿತ್ತು. ಇದು ವಯಸ್ಕರಲ್ಲಿ ಸಾಮಾನ್ಯ ನಿಕೋಟಿನ್ ಮಟ್ಟಕ್ಕಿಂತ 3 ಸಾವಿರ ಪಟ್ಟು ಹೆಚ್ಚು. ಇದು ಆರೋಗ್ಯಕ್ಕೆ ಅಪಾಯಕಾರಿ.
ತಾಯಿ ಅಸ್ತಮಾದಿಂದ ಬಳಲುತ್ತಿರುವುದನ್ನು ವೈದ್ಯರ ತಂಡ ಪತ್ತೆ ಮಾಡಿದೆ. ಆಕೆ ದಿನಕ್ಕೆ 10-15 ಪೌಚ್‌ಗಳಷ್ಟು ತಂಬಾಕು-ಗುಟ್ಕಾವನ್ನು ಸೇವಿಸುತ್ತಿದ್ದಳು. ಇದರಿಂದಾಗಿ ಹೊಟ್ಟೆಯಲ್ಲಿದ್ದ ಮಗುವಿನ ನಿಕೋಟಿನ್ ಮಟ್ಟವು ರಕ್ತದ ಮೂಲಕ ತುಂಬಾ ಹೆಚ್ಚಾಗಿದೆ.
ತಾಯಿ 15 ವರ್ಷದವಳಿದ್ದಾಗಿನಿಂದಲೇ ತಂಬಾಕು ಸೇವನೆಯ ಅಭ್ಯಾಸ ಮಾಡಿಕೊಂಡಿದ್ದಳು. ಐದು ದಿನಗಳ ಚಿಕಿತ್ಸೆಯ ನಂತರ, ಮಗುವಿನಲ್ಲಿ ಸುಧಾರಣೆ ಕಂಡುಬಂದಿದೆ. ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮಹಿಳೆಯರು ತಂಬಾಕು ಮತ್ತು ಧೂಮಪಾನದ ಚಟ ಅಂಟಿಸಿಕೊಂಡರೆ ಅದರ ಗಂಭೀರ ಪರಿಣಾಮಗಳು ಮಗುವಿನ ಮೇಲೆ ಉಂಟಾಗಬಹುದು. ಅಂತಹ ಮಹಿಳೆಯರಲ್ಲಿ ಗರ್ಭಪಾತದ ಅಪಾಯ ಕೂಡ ಹೆಚ್ಚು.
ಧೂಮಪಾನದ ಅನಾನುಕೂಲಗಳು
ಧೂಮಪಾನ ಮಾಡುವ ಮಹಿಳೆಯರಿಗೆ ಗರ್ಭ ಧರಿಸಲು ಸಮಸ್ಯೆಯಾಗುತ್ತದೆ. ಗರ್ಭಾವಸ್ಥೆಯಲ್ಲಿ ಧೂಮಪಾನ ಮಾಡುವುದರಿಂದ ಹುಟ್ಟಲಿರುವ ಮಗುವಿನ ಅಂಗಾಂಶಗಳಿಗೆ ಹಾನಿಯಾಗುತ್ತದೆ. ಇದರ ಅಡ್ಡ ಪರಿಣಾಮಗಳು ಶ್ವಾಸಕೋಶ ಮತ್ತು ಮೆದುಳಿನ ಮೇಲೆ ಕಂಡುಬರುತ್ತವೆ. ತಾಯಿ ತಂಬಾಕು ಸೇವನೆ ಮತ್ತು ಧೂಮಪಾನ ಮಾಡಿದ್ರೆ ಹೊಟ್ಟೆಯಲ್ಲಿರುವ ಮಗುವಿನ ತುಟಿಗಳು ಮತ್ತು ಅಡಿಭಾಗಗಳು ಜನನದ ಸಮಯದಲ್ಲಿ ಕತ್ತರಿಸದಂತಹ ಸ್ಥಿತಿಗೆ ತಲುಪಬಹುದು.
ಗರ್ಭಾವಸ್ಥೆಯಲ್ಲಿ ಮದ್ಯಪಾನದ ಅನಾನುಕೂಲಗಳು
ಗರ್ಭಾವಸ್ಥೆಯಲ್ಲಿ ಮದ್ಯಪಾನ ಮಾಡುವುದರಿಂದ ಗರ್ಭಪಾತ, ಮಗುವಿನ ಅಕಾಲಿಕ ಜನನ ಮತ್ತು ತೂಕ ಕಡಿಮೆಯಾಗುವ ಅಪಾಯ ಹೆಚ್ಚಾಗಿರುತ್ತದೆ. ಜನನದ ನಂತರ ಮಗುವಿನ ಬೆಳವಣಿಗೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಗರ್ಭಾವಸ್ಥೆಯಲ್ಲಿ ಮದ್ಯಪಾನ ಮಾಡುವುದರಿಂದ ಮಗುವಿನಲ್ಲಿ ಆಲ್ಕೋಹಾಲ್ ಸ್ಪೆಕ್ಟ್ರಮ್ ಅಸ್ವಸ್ಥತೆಯನ್ನು ಉಂಟುಮಾಡಬಹುದು.