ತಂಪು ಪಾನೀಯಗಳನ್ನು ಇಷ್ಟಪಡುವವರು ಅನೇಕರಿದ್ದಾರೆ. ಪ್ರತಿದಿನ ಕೋಲ್ಡ್ ಡ್ರಿಂಕ್ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಈ ಹವ್ಯಾಸವು ನಿಮ್ಮನ್ನು ಕ್ಯಾನ್ಸರ್ ರೋಗಿಯನ್ನಾಗಿ ಮಾಡಬಹುದು. ಹೊಸದೊಂದು ಸಂಶೋಧನೆಯ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಈ ಎಚ್ಚರಿಕೆ ನೀಡಿದೆ. ಈ ಅಧ್ಯಯನದ ಪ್ರಕಾರ ಕೋಕಾ-ಕೋಲಾ ಮತ್ತು ಚೂಯಿಂಗ್ ಗಮ್ ಸೇರಿದಂತೆ ಇತರ ತಂಪು ಪಾನೀಯಗಳಲ್ಲಿ ಬಳಸುವ ಕೃತಕ ಸಿಹಿಕಾರಕ ಆಸ್ಪರ್ಟೇಮ್‌ನಿಂದ ಕ್ಯಾನ್ಸರ್ ಅಪಾಯವಿದೆ.
ಸಾಮಾನ್ಯ ತಂಪು ಪಾನೀಯಗಳಲ್ಲಿ ಸಕ್ಕರೆಯನ್ನು ಸಿಹಿಗಾಗಿ ಬಳಸಲಾಗುತ್ತದೆ. ಆದರೆ ಇನ್ನೊಂದು ಬಗೆಯ ಕೋಲ್ಡ್ ಡ್ರಿಂಕ್‌ನಲ್ಲಿ ಸಕ್ಕರೆಯ ಬದಲಿಗೆ ಕೃತಕ ಸಿಹಿಕಾರಕವನ್ನು ಬಳಸಲಾಗುತ್ತದೆ. ಈ ಕೃತಕ ಸಿಹಿಕಾರಕಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು. ಆಸ್ಪರ್ಟೇಮ್ ಎಂಬ ಕೃತಕ ಸಿಹಿಕಾರಕವನ್ನು ತಂಪು ಪಾನೀಯಗಳು ಮತ್ತು ಚೂಯಿಂಗ್ ಗಮ್‌ನಲ್ಲಿ ಬಳಸಲಾಗುತ್ತದೆ. ಆಸ್ಪರ್ಟೇಮ್, ವಾಸ್ತವವಾಗಿ ಮೀಥೈಲ್ ಎಸ್ಟರ್ ಎಂಬ ಸಾವಯವ ಸಂಯುಕ್ತವಾಗಿದೆ. ಇದನ್ನು ಪ್ರಯೋಗಾಲಯದಲ್ಲಿ ತಯಾರಿಸಲಾಗುತ್ತದೆ. ಇದು ಸಕ್ಕರೆಗಿಂತ 200 ಪಟ್ಟು ಸಿಹಿಯಾಗಿರುತ್ತದೆ.
ಅಂದಾಜಿನ ಪ್ರಕಾರ ಆಸ್ಪರ್ಟೇಮ್ ಅನ್ನು 95 ಪ್ರತಿಶತದಷ್ಟು ಸಕ್ಕರೆ ಮುಕ್ತ ಸಾಫ್ಟ್ ಡ್ರಿಂಕ್ ಉದ್ಯಮದಲ್ಲಿ ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಗರ್ ಫ್ರೀ ಮಾತ್ರೆಗಳು ಮತ್ತು ಪೌಡರ್‌ಗಳಲ್ಲಿ 97 ಪ್ರತಿಶತದಷ್ಟು ಆಸ್ಪರ್ಟೇಮ್ ಅನ್ನು ಬಳಸಲಾಗುತ್ತದೆ. ಹಾಗಾಗಿ ಶುಗರ್ ಫ್ರೀ ತಂಪು ಪಾನೀಯಗಳು ಕೂಡ ಅಪಾಯಕಾರಿ. ಇಲ್ಲಿಯವರೆಗೆ ಕೃತಕ ಸಿಹಿಕಾರಕ ಆಸ್ಪರ್ಟೇಮ್ ಅನ್ನು ಆಹಾರ ವಿಭಾಗದಲ್ಲಿ ಇರಿಸಲಾಗಿತ್ತು. ಅದಕ್ಕಾಗಿಯೇ WHO ಸಹ ಅದರ ಬಳಕೆಯನ್ನು ಅಪಾಯಕಾರಿ ಎಂದು ಪರಿಗಣಿಸಲಿಲ್ಲ.
ಆದರೆ ಈ ಸಿಹಿಕಾರಕದ ನಿರಂತರ ಬಳಕೆಯು ದೇಹದ ಅನೇಕ ಭಾಗಗಳಲ್ಲಿ ಸುಮಾರು 92 ರೀತಿಯ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಆಸ್ಪರ್ಟೇಮ್ ಅನ್ನು ದೀರ್ಘಾವಧಿಗೆ ಸೇವನೆ ಮಾಡಿದ್ರೆ ದೃಷ್ಟಿ ಮಸುಕಾಗಬಹುದು. ಇದು ಕುರುಡುತನಕ್ಕೆ ಕಾರಣವಾಗಬಹುದು. ಕಿವುಡುತನಕ್ಕೂ ಇದು ಕಾರಣವಾಗಬಹುದು.ಇದರ ನಿರಂತರ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.
ಇಷ್ಟು ಮಾತ್ರವಲ್ಲದೆ ಮೈಗ್ರೇನ್, ನೆನಪಿನ ಶಕ್ತಿ ದುರ್ಬಲವಾಗುವುದು, ಖಿನ್ನತೆ, ಕಿರಿಕಿರಿ, ನಿದ್ರಾಹೀನತೆ, ಮಧುಮೇಹ, ಕೂದಲು ಉದುರುವಿಕೆ, ತೂಕ ನಷ್ಟ ಅಥವಾ ಹೆಚ್ಚಳದಂತಹ ಸಮಸ್ಯೆಗಳು ಸಹ ಸಂಭವಿಸಬಹುದು. ವರದಿಯ ಪ್ರಕಾರ ಈ ಕೃತಕ ಸಿಹಿಕಾರಕದಿಂದ ತಯಾರಿಸಿದ ಪಾನೀಯಗಳು ಪ್ರತಿ ವರ್ಷ ಸುಮಾರು ಎರಡು ಲಕ್ಷ ಸಾವುಗಳಿಗೆ ನೇರ ಕಾರಣವಾಗಿವೆ. ಇದು ಕ್ಯಾನ್ಸರ್‌ಗೂ ಕಾರಣವಾಗುತ್ತಿದೆ ಎಂಬ ಅಂಶವೀಗ ಬಹಿರಂಗವಾಗಿದೆ.
ಇಂಟರ್‌ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಅಂದರೆ IARC ಶೀಘ್ರದಲ್ಲೇ ಆಸ್ಪರ್ಟೇಮ್ ಅನ್ನು ಕಾರ್ಸಿನೋಜೆನಿಕ್ ವಿಭಾಗದಲ್ಲಿ ಸೇರಿಸುವುದಾಗಿ ಘೋಷಿಸಿದೆ. ಕಾರ್ಸಿನೋಜೆನ್‌ಗಳು ಮಾನವರಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಪದಾರ್ಥಗಳಾಗಿವೆ.ಇನ್ಮುಂದೆ ಮಾರುಕಟ್ಟೆಯಲ್ಲಿ ಸಿಗುವ ಶುಗರ್ ಫ್ರೀ ವಸ್ತುಗಳ ಮೇಲೆ ಕ್ಯಾನ್ಸರ್ ಅಪಾಯದ ಎಚ್ಚರಿಕೆ ಬರಹಗಳನ್ನು ಕಡ್ಡಾಯ ಮಾಡಲಾಗುತ್ತದೆ.
2016 ರಲ್ಲಿ ಭಾರತದಲ್ಲಿ ಒಬ್ಬ ವ್ಯಕ್ತಿಯು ವಾರ್ಷಿಕವಾಗಿ ಸರಾಸರಿ 44 ಬಾಟಲಿಗಳಷ್ಟು ತಂಪು ಪಾನೀಯಗಳನ್ನು ಕುಡಿಯುತ್ತಿದ್ದನು. 2021 ರಲ್ಲಿ ಈ ಪ್ರಮಾಣ 84ಕ್ಕೇರಿದೆ. ಅಮೆರಿಕದಂತಹ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ತಂಪು ಪಾನೀಯಗಳ ಬಳಕೆ ತುಂಬಾ ಕಡಿಮೆ. ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಸರಾಸರಿ 1496 ಬಾಟಲಿ ತಂಪು ಪಾನೀಯಗಳನ್ನು ಕುಡಿಯುತ್ತಾನೆ. ಮೆಕ್ಸಿಕೊದಲ್ಲಿ 1489, ಜರ್ಮನಿಯಲ್ಲಿ 1221 ಮತ್ತು ಬ್ರೆಜಿಲ್‌ನಲ್ಲಿ ಒಬ್ಬ ವ್ಯಕ್ತಿಯು ವಾರ್ಷಿಕವಾಗಿ ಸರಾಸರಿ 537 ಬಾಟಲಿಗಳಷ್ಟು ತಂಪು ಪಾನೀಯಗಳನ್ನು ಕುಡಿಯುತ್ತಾನೆ.