ಪ್ರಸ್ತುತ 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿದ್ದು, ಮುಂದಿನ ಶೈಕ್ಷಣಿಕ ಜೀವನಕ್ಕೆ ನೆರವಾಗುವ ಈ ಪರೀಕ್ಷೆಯನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ಬರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎದೆಗುಂದುವ ಸಂಗತಿ ಎದುರಾದರೆ ಆತಂಕ ಮನೆ ಮಾಡುತ್ತದೆ.
ಹೌದು, ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯನ್ನು ಕಳೆದುಕೊಂಡಿದ್ದು, ಆದರೆ ಆಕೆಯ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಶಾಲಾ ಮುಖ್ಯೋಪಾಧ್ಯಾಯರು ನೋವಿನಲ್ಲಿದ್ದ ಆಕೆಗೆ ಪರೀಕ್ಷೆ ಬರೆಯಲು ಮನವೊಲಿಸಿದ್ದಾರೆ.
ಇಂತದೊಂದು ಘಟನೆ ಬೆಳಗಾವಿ ಜಿಲ್ಲೆ ಸಂಕೇಶ್ವರ ಸಮೀಪದ ಕೇಸ್ತಿ ಗ್ರಾಮದಲ್ಲಿ ನಡೆದಿದ್ದು 10ನೇ ತರಗತಿ ವಿದ್ಯಾರ್ಥಿನಿ ಮಿದ್ದತ್ ಅಬ್ದುಲ್ ರಜಾಕ್ ಸನದಿ ತಂದೆ ಅಬ್ದುಲ್ ರಜಾಕ್ ಹೃದಯಾಘಾತದಿಂದಾಗಿ ಗುರುವಾರ ಮಧ್ಯರಾತ್ರಿ ವಿಧಿವಶರಾಗಿದ್ದರು.
ಈ ವಿಷಯ ತಿಳಿದ ಕೇಸ್ತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಭಾಗೋಜಿ, ತಂದೆ ಕಳೆದುಕೊಂಡ ನೋವಿನಲ್ಲಿದ್ದ ಬಾಲಕಿಗೆ ಧೈರ್ಯ ತುಂಬಿ ಪರೀಕ್ಷೆ ಬರೆಯುವಂತೆ ಮನವೊಲಿಸಿದ್ದಾರೆ. ಅಲ್ಲದೆ ವಿಷಯ ತಿಳಿದ ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಹಾಗೂ ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಗೆ ಸಾಂತ್ವನ ಹೇಳಿದ್ದಾರೆ.