ಹಾಸನ: ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಇಲ್ಲೊಂದು ಇಂತದ್ದೇ ಘಟನೆ ನಡೆದಿದ್ದು, ಕೌಟುಂಬಿಕ ಕಲಹದಿಂದ ದೂರವಾಗಿದ್ದ ಮಗುವನ್ನು ತಾಯಿ ಮಡಿಲಿಗೆ ಸೇರಿಸಿದ ಘಟನೆ ನಡೆದಿದೆ.
ಹಾಸನ ನಗರದ ಪೆನ್ ಷನ್ ಮೊಹಲ್ಲಾದಲ್ಲಿ ವಾಸವಾಗಿದ್ದ ಗಂಡ-ಹೆಂಡತಿ ಕೌಟುಂಬಿಕ ಕಲಹದಿಂದಾಗಿ ಬೇರ್ಪಟ್ಟಿದ್ದರು. ತಂದೆ-ತಾಯಿ ಜಗಳದಿಂದಾಗಿ 5 ವರ್ಷದ ಮಗಳು ತಾಯಿಯಿಂದ ದೂರವಾಗಿದ್ದಳು. ಗಂಡ ತನ್ನ ಮಗಳನ್ನು ತಾಯಿಯಿಂದ ಬೇರ್ಪಡಿಸಿದ್ದ.
ಈ ವಿಚಾರ ತಿಳಿದ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆ ತಂದೆ ಬಳಿ ಇದ್ದ ಮಗುವನ್ನು ತಾಯಿ ಮಡಿಲಿಗೆ ನೀಡಿದ್ದಾರೆ.
ರಿಜ್ವಾನ್ ಅಹ್ಮದ್ ಹಾಗೂ ನಜ್ನೀನ್ 2016ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಓರ್ವ ಮಗಳು. ಪತ್ನಿ ಹಾಗೂ ಮಗುವಿನೊಂದಿಗೆ ರಿಜ್ವಾನ್ ದುಬೈನಲ್ಲಿ ವಾಸವಾಗಿದ್ದ. ಕೌಟುಂಬಿಕ ಕಲಹದಿಂದಾಗಿ ಪತ್ನಿ ದುಬೈನಿಂದ ವಾಪಸ್ ಆಗಿದ್ದಳು. ಮಗಳು ಆಯೇಷಾಳ ಬೇರೆ ಕಡೆ ಕರೆದೊಯ್ದ ಪತಿ ರಿಜ್ವಾನ್ ಆಕೆಯನ್ನು ಬಚ್ಚಿಟ್ಟಿದ್ದ. ಸಂಬಂಧಿಕರ ಮನೆಯಲ್ಲಿ ಮಗಳನ್ನು ಬಿಟ್ಟ ರಿಜ್ವಾನ್ ಕೀನ್ಯಾಗೆ ತೆರಳಿದ್ದ. ಪತ್ನಿಗೆ ಮಗಳ ಬಗ್ಗೆ ಗೊತ್ತಾಗದಂತೆ ಆಕೆಯನ್ನು ಇರಿಸಿದ್ದ.
ಮಗಳ ಬಗ್ಗೆ ವಿಷಯ ಗೊತ್ತಾಗದೇ ಕಂಗಾಲಾದ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪ್ರಕರಣ ದಾಖಲಿಸಿಕೊಂಡ ಡಿ ವೈ ಎಸ್ ಪಿ ತನಿಖೆ ನಡೆಸಿದ್ದರು. ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಪೊಲೀಸರು ರಿಜ್ವಾನ್ ಮನೆ ಮೇಲೆ ದಾಳಿ ನಡೆಸಿದಾಗ ಮಗಳನ್ನು ಬಚ್ಚಿಟ್ಟ ವಿಷಯ ಗೊತ್ತಾಗಿದೆ. ಮಗುವನ್ನು ತಾಯಿ ಮಡಿಲಿಗೆ ಕೊಡಲು ರಿಜ್ವಾನ್ ಪೋಷಕರು ವಿರೋಧ ಮಾಡಿದ್ದಾರೆ. ಈ ನಡುವೆ ಪ್ರಕರಣದ ಬಗ್ಗೆ ತೀವ್ರ ವಿಚಾರಣೆ ನಡೆಸಿದ ಪೊಲೀಸರಿಗೆ ರಿಜ್ವಾನ್ ಗೆ ನಜ್ನೀನ್ ಎರಡನೇ ಪತ್ನಿ ಈ ಹಿಂದೆ ಮೊದಲ ಮದುವೆಯಾಗಿ ಪತ್ನಿಯನ್ನು ಬಿಟ್ಟು ರಿಜ್ವಾನ್ ಎರಡನೇ ಮದುವೆಯಾಗಿದ್ದ ಎಂಬುದು ಗೊತ್ತಾಗಿದೆ. ಈಗ ಎರಡನೇ ಹೆಂಡತಿಯನ್ನೂ ಬಿಟ್ಟು ಮಗಳನ್ನು ತನ್ನ ತಾಯಿ ಮನೆಯಲ್ಲಿ ಬಚ್ಚಿಟ್ಟು ಕೀನ್ಯಾಗೆ ಹಾರಿದ್ದಾನೆ. ಸಧ್ಯ 5 ವರ್ಷದ ಮಗು ಆಯೇಷಾಳನ್ನು ಪೊಲೀಸರು ಹಾಗೂ ಅಧಿಕಾರಿಗಳು ತಾಯಿ ಮಡಿಲಿಗೆ ಸೇರಿಸಿದ್ದಾರೆ.