ಮುಂಬೈ: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಯಕೃತ್ತನ್ನು ದಾನ ಮಾಡಬಹುದೇ ಎಂದು ನಿರ್ಧರಿಸಲು ಬಾಂಬೆ ಹೈಕೋರ್ಟ್, ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಚಿಂತಾಜನಕ ಸ್ಥಿತಿಯಲ್ಲಿರುವ ತನ್ನ ತಂದೆಗೆ ಕಸಿ ಮಾಡಲು ಅಪ್ರಾಪ್ತೆ ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಾಧವ್ ಜಾಮ್ದಾರ್ ಅವರ ವಿಭಾಗೀಯ ಪೀಠವು ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಬಾಲಕಿಯ ತಂದೆಗೆ ಲಿವರ್ ಸಿರೋಸಿಸ್ ಡಿಕಂಪೆನ್ಸೇಟೆಡ್ ಇರುವುದರಿಂದ ಯಕೃತ್ತಿನ ಕಸಿ ಅಗತ್ಯವಿದೆ. ಎಲ್ಲಾ ನಿಕಟ ಸಂಬಂಧಿಗಳನ್ನು ಸಂಭಾವ್ಯ ದಾನಿಗಳೆಂದು ಮೌಲ್ಯಮಾಪನ ಮಾಡಲಾಗಿದೆ. ಆದರೆ ಅರ್ಜಿದಾರರನ್ನು (ಅವರ ಮಗಳು) ಹೊರತುಪಡಿಸಿ, ಯಾರೂ ವೈದ್ಯಕೀಯವಾಗಿ ಸೂಕ್ತವಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಹೀಗಾಗಿ ಪುತ್ರಿಯು ತನ್ನ ತಂದೆಗೆ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದು, ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿದಾರರು ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ, ಮಾನವ ಅಂಗಗಳ ಕಸಿ ಅಡಿಯಲ್ಲಿ ಸ್ಥಾಪಿಸಲಾದ ರಾಜ್ಯ ಸರ್ಕಾರದ ಸೂಕ್ತ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ತನ್ನ ಯಕೃತ್ತಿನ ಭಾಗವನ್ನು ದಾನ ಮಾಡಲು ಸಾಧ್ಯವಾಗುವುದಿಲ್ಲ. ಅಪ್ರಾಪ್ತ ವಯಸ್ಕರಿಗೆ ಅಂಗಾಂಗ ಅಥವಾ ಅಂಗದ ಭಾಗವನ್ನು ಕಸಿ ಮಾಡಲು ರಚಿತವಾದ ಅಧಿಕಾರ ಸಮಿತಿಯಿಂದ ಸೂಕ್ತ ಅನುಮತಿಯೊಂದಿಗೆ ಮಾತ್ರ ಅನುಮತಿಸಲಾಗಿದೆ ಎಂದು ಕಾಯಿದೆ ಹೇಳುತ್ತದೆ.
ಅರ್ಜಿದಾರರು ಏಪ್ರಿಲ್ 25 ರಂದು ತನ್ನ ಯಕೃತ್ತಿನ ಭಾಗವನ್ನು ತನ್ನ ಅನಾರೋಗ್ಯದ ತಂದೆಗೆ ಕಸಿ ಮಾಡಲು ಅನುಮತಿ ಕೋರಿ ಸಂಬಂಧಿತ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ತಪನ್ ಥಟ್ಟೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.