‘ಡ್ರೋನ್’ ನಿಂದ ತನ್ನ ಹೊಲಕ್ಕೆ ಔಷಧ ಸಿಂಪಡಣೆ ಮಾಡುವ ಮೂಲಕ ಹಾವೇರಿ ಜಿಲ್ಲೆಯ ರೈತರೊಬ್ಬರು ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಇದರಿಂದಾಗಿ ಡ್ರೋನ್ ಬಳಕೆ ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಿಗೆ ಮಾತ್ರ ಸೀಮಿತವಲ್ಲ. ಇದರಿಂದ ಇತರೆ ಉಪಯೋಗಗಳನ್ನು ಸಹ ಪಡೆದುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹಾವೇರಿ ತಾಲೂಕಿನ ತಿಮ್ಮಾಪುರದ ರೈತ ರಾಜು ಹೊಸಕೇರಿ ಇಂಥದೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ಶಿಡೇನೂರು ಗ್ರಾಮದಲ್ಲಿ ತಾವು ಗುತ್ತಿಗೆ ಪಡೆದಿದ್ದ 7 ಎಕರೆ ಕೃಷಿ ಭೂಮಿಗೆ ಡ್ರೋನ್ ಮೂಲಕ ಔಷಧವನ್ನು ಸಿಂಪಡಿಸಿದ್ದಾರೆ. ಈ ಹೊಲದಲ್ಲಿ ಅವರು ಶುಂಠಿ ಮತ್ತು ಅಡಕೆ ಬೆಳೆದಿದ್ದು, ಶುಂಠಿಗೆ ಬರುವ ರೋಗ ಬಾಧೆ ತಪ್ಪಿಸಲು ಔಷಧವನ್ನು ಸಿಂಪಡಣೆ ಮಾಡಲಾಗಿದೆ.
ಡ್ರೋನ್ ನಲ್ಲಿ ಹತ್ತು ಲೀಟರ್ ಟ್ಯಾಂಕ್ ಇದ್ದು ಔಷಧವನ್ನು ತುಂಬಿಸಿದ ಬಳಿಕ, ಕೇವಲ 15 ನಿಮಿಷಗಳ ಅವಧಿಯಲ್ಲಿ ಒಂದು ಎಕರೆಗೆ ಸ್ಪ್ರೇ ಮಾಡಲಾಗಿದೆ. ರಾಜು ಅವರು ಡ್ರೋನ್ ಬಳಕೆಯ ಮಾಹಿತಿಯನ್ನು ಯೂಟ್ಯೂಬ್ ವಿಡಿಯೋ ವೀಕ್ಷಣೆ ಮೂಲಕ ಪಡೆದುಕೊಂಡಿದ್ದು, ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಪ್ರತಿ ಎಕರೆಗೆ ಔಷಧವನ್ನು ಹೊರತುಪಡಿಸಿ ಡ್ರೋನ್ ವೆಚ್ಚ ಕೇವಲ 600 ರೂಪಾಯಿ ತಗುಲಿದೆ ಎನ್ನಲಾಗಿದೆ.