ತಂದೆಯೊಬ್ಬ ಡ್ರಗ್ ವ್ಯಸನಿಯಾಗಿದ್ದ ತನ್ನ ಪುತ್ರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದಿರುವ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ. ಕೃತ್ಯದ ನಂತರ ಆರೋಪಿ ತಂದೆ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ರಾಜಸ್ಥಾನ ಗಡಿಭಾಗದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಅಮದಾಬಾದ್ ನಿವಾಸಿ ನೀಲೇಶ್ ಜೋಶಿ ಎಂಬಾತ ಸಿಟ್ಟಿನ ಭರದಲ್ಲಿ ಡ್ರಗ್ ವ್ಯಸನಿಯಾಗಿದ್ದ ತನ್ನ ಪುತ್ರ ಸ್ವಯಂ ಜೋಶಿಯನ್ನು ರುಬ್ಬು ಗುಂಡಿನಿಂದ ಹೊಡೆದಿದ್ದ. ಇದರಿಂದಾಗಿ ಆತ ಮೃತಪಟ್ಟಿದ್ದು, ಪೊಲೀಸರು ತನ್ನನ್ನು ಬಂಧಿಸಬಹುದೆಂಬ ಆತಂಕ ನೀಲೇಶ್ ಜೋಶಿಯನ್ನು ಕಾಡಿತ್ತು.
ಹೀಗಾಗಿ ಪುತ್ರನ ದೇಹವನ್ನು ಎಲೆಕ್ಟ್ರಿಕ್ ಕಟ್ಟರ್ ನಿಂದ ಆರು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಬೇರೆ ಬೇರೆ ಭಾಗಗಳಲ್ಲಿ ಎಸೆದು ಬಂದಿದ್ದ. ಬಳಿಕ ನೇಪಾಳಕ್ಕೆ ಪರಾರಿಯಾಗಲು ರೈಲು ಏರಿದ್ದ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದು, ನೀಲೇಶ್ ಜೋಶಿ ನಿವೃತ್ತ ಟ್ರಾಫಿಕ್ ಇನ್ಸ್ಪೆಕ್ಟರ್ ಎಂದು ಹೇಳಲಾಗಿದೆ. ಈತನ ಪತ್ನಿ, ಪುತ್ರಿ ಜರ್ಮನಿಯಲ್ಲಿದ್ದು ಡ್ರಗ್ ವ್ಯಸನಿಯಾಗಿದ್ದ ಪುತ್ರನ ಕಾರಣಕ್ಕೆ ನೀಲೇಶ್ ಅಹಮದಾಬಾದಿನಲ್ಲಿದ್ದರು ಎಂದು ಹೇಳಲಾಗಿದೆ.