ಲಕ್ಕವಳ್ಳಿಯ ಭದ್ರಾ ಜಲಾಶಯ ನೋಡಲು ಯುವಕ – ಯುವತಿ ತೆರಳಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚಾಕು ತೋರಿಸಿ ಮೊಬೈಲ್ ಫೋನ್ ಹಾಗೂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣದ ವಿವರ: ಹಾಡೋನ ಹಳ್ಳಿಯ ಯುವತಿ ತನ್ನ ಅತ್ತೆಯ ಮಗ ಗಣೇಶ್ ಎಂಬಾತನೊಂದಿಗೆ ಸೆಪ್ಟೆಂಬರ್ 28ರಂದು ಬೈಕಿನಲ್ಲಿ ಬಿ ಆರ್ ಪಿ ಗೆ ತೆರಳಿದ್ದರು. ಇವರಿಬ್ಬರು ಕೆಪಿಎಸ್ ಪ್ಲಾಂಟ್ ಬಳಿ ಇರುವ ಮೆಟ್ಟಿಲ ಬಳಿ ಕೂತಿದ್ದ ವೇಳೆ ಅಪರಿಚಿತ ಯುವಕರು ಅಲ್ಲಿಗೆ ಬಂದಿದ್ದಾರೆ.
ಇವರಿಬ್ಬರನ್ನು ವಿಚಾರಿಸಿದ ಅವರು ಬಳಿಕ ಚಾಕು ತೋರಿಸಿ ಗಣೇಶ್ ಬಳಿ ಇದ್ದ ವಿವೊ ಮೊಬೈಲ್ ಫೋನ್ ಹಾಗೂ ಯುವತಿ ಕುತ್ತಿಗೆಯಲ್ಲಿದ್ದ 60 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅಲ್ಲದೆ ಅದಕ್ಕೂ ಮುನ್ನ ಯಾರಿಗಾದರೂ ವಿಷಯ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಇದರಿಂದ ಹೆದರಿದ್ದ ಯುವಕ – ಯುವತಿ ಮೌನಕ್ಕೆ ಶರಣಾಗಿದ್ದು, ಆದರೆ ಯುವತಿ ಮನೆಯವರು ಚಿನ್ನದ ಸರ ಎಲ್ಲಿ ಎಂದು ಪ್ರಶ್ನಿಸಿದಾಗ ಸ್ನೇಹಿತೆ ಬಳಿ ಇದೆ ಎಂದು ಸುಳ್ಳು ಹೇಳಿದ್ದಾಳೆ. ಆದರೆ ಎಷ್ಟು ದಿನವಾದರೂ ಚಿನ್ನದ ಸರ ತರದ ಕಾರಣ ಅನುಮಾನಗೊಂಡು ಪ್ರಶ್ನಿಸಿದ ವೇಳೆ ವಿಷಯ ತಿಳಿದು ಬಂದಿದೆ. ಇದೀಗ ಪೋಷಕರ ಸೂಚನೆ ಮೇರೆಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.