ನಾವು ಹೊಸ ಮೊಬೈಲ್ ಖರೀದಿಸಿದಾಗಲೆಲ್ಲ ಕೆಲವು ಅಪ್ಲಿಕೇಶನ್‌ಗಳನ್ನು ಮೊಬೈಲ್ ಕಂಪನಿಯವರು ಇನ್‌ಸ್ಟಾಲ್ ಮಾಡಿ ಕೊಡ್ತಾರೆ. ಮೊದಲೇ ಸ್ಥಾಪಿತವಾದ ಆ್ಯಪ್‌ಗಳು ಒಂದಷ್ಟು ಉಪಯೋಗಕ್ಕೆ ಬಂದರೆ, ಕೆಲವು ನಿಷ್ಪ್ರಯೋಜಕವಾಗಿವೆ. ಆದರೆ ಇವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿದರೆ ಉಳಿದ ಅಪ್ಲಿಕೇಶನ್‌ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ನೋಟಿಫಿಕೇಶನ್ ಕೂಡ ಬಳಕೆದಾರರಿಗೆ ಬರುತ್ತದೆ. ಇದೀಗ ಅಂತಹ ಪೂರ್ವ-ಸ್ಥಾಪಿತ ಅಪ್ಲಿಕೇಶನ್‌ಗಳ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತ ಸರ್ಕಾರವು ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಆದರೆ ಚೀನಾದ ಕಂಪನಿಗಳು ಭಾರತದಲ್ಲಿ ಮೊಬೈಲ್ ಮಾರಾಟ ಮಾಡುತ್ತವೆ. ಅವುಗಳಲ್ಲಿ ಪೂರ್ವ-ಸ್ಥಾಪಿತ ಅಪ್ಲಿಕೇಶನ್‌ಗಳು ಅಧಿಕವಾಗಿವೆ. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಬಳಕೆದಾರರ ಡೇಟಾ ಕದಿಯಬಹುದು ಅನ್ನೋದು ಸರ್ಕಾರದ ಆತಂಕ. ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಸ್ಥಾಪಿಸಲಾದ ಅಪ್ಲಿಕೇಶನ್‌ಗಳು ಬಳಕೆದಾರರ ಡೇಟಾಗೆ ಸುರಕ್ಷಿತವಲ್ಲ ಎಂಬ ವರದಿಗಳು ಕೂಡ ಬಂದಿರುವುದರಿಂದ ಅವುಗಳ ಮೇಲೆ ಹದ್ದಿನ ಕಣ್ಣಿಡಲು ಸರ್ಕಾರ ನಿರ್ಧರಿಸಿದೆ.
ಬಳಕೆದಾರರ ಡೇಟಾ ದುರ್ಬಳಕೆಯನ್ನು ತಡೆಯುವುದು ಸರ್ಕಾರದ ಉದ್ದೇಶ. ಬಳಕೆದಾರರ ಡೇಟಾ ರಕ್ಷಿಸಲು ಸರ್ಕಾರ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮೊದಲೇ ಸ್ಥಾಪಿಸಲಾದ ಅಪ್ಲಿಕೇಶನ್‌ಗಳ ಮೂಲಕ ಡೇಟಾ ಕಳವು ನಡೆಯುತ್ತಿದ್ದರೆ ಅಂತಹ ಸ್ಮಾರ್ಟ್‌ಫೋನ್ ಕಂಪನಿಗಳ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಈ ಸಂಬಂಧ ಹೊಸ ನಿಯಮವನ್ನೇ ತರಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಇದರಿಂದಾಗಿ ಕಂಪನಿಗಳು ಫೋನ್‌ನಲ್ಲಿ ಮೊದಲೇ ಸ್ಥಾಪಿಸಲಾದ ಅಪ್ಲಿಕೇಶನ್‌ಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಇದರೊಂದಿಗೆ ಆಪರೇಟಿಂಗ್ ಸಿಸ್ಟಂನಲ್ಲಿನ ನವೀಕರಣಗಳನ್ನು ಸಹ ಸರ್ಕಾರವು ಮೇಲ್ವಿಚಾರಣೆ ಮಾಡುತ್ತದೆ. ಸರ್ಕಾರದ ಈ ಖಡಕ್ ನಿರ್ಧಾರ ಅನೇಕ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಬಿಸಿ ಮುಟ್ಟಿಸಲಿದೆ.