ಒಮಿಕ್ರಾನ್ ಇಡೀ ದೇಶದಲ್ಲಿ ವೇಗವಾಗಿ ಹರಡ್ತಿದೆ. ಈಗಾಗ್ಲೇ 1525 ಒಮಿಕ್ರಾನ್ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಇದನ್ನ ನಿಯಂತ್ರಿಸಲು ದೆಹಲಿ ಮಾದರಿ ಬಳಸಿ ಎಂದು ರಾಜ್ಯಗಳಿಗೆ ತಜ್ಞರು ಶಿಫಾರಸ್ಸು ಮಾಡಿದ್ದಾರೆ.
ಜನವರಿ – ಫೆಬ್ರವರಿಯಲ್ಲಿ ಮೂರನೇ ಅಲೆ ಎಚ್ಚರಿಕೆ ನೀಡಿರುವ ತಜ್ಞರು, ಅದಕ್ಕೆ ಪರಿಹಾರವಾಗಿ ರಾಷ್ಟ್ರ ರಾಜಧಾನಿಯ ಪ್ಲ್ಯಾನ್ ಅಳವಡಿಸಿಕೊಳ್ಳಿ ಎಂದಿದ್ದಾರೆ. ಯಾವ ಯಾವ ಚಟುವಟಿಕೆಗಳಿಗೆ ಯಾವಾಗ ನಿರ್ಬಂಧ ಹೇರಬೇಕು ಎಂಬುದನ್ನ ನಿರ್ಧರಿಸಲು ಕಲರ್ ಕೋಡ್ ಬಳಸಲು ಸೂಚನೆ ನೀಡಲಾಗಿದೆ.
ಕೋವಿಡ್ ಪಾಸಿಟಿವ್ ರೇಟ್ ಶೇ.1 ಕ್ಕಿಂತ ಕಡಿಮೆ ಇದ್ದರೆ ಯೆಲ್ಲೋ ಅಲರ್ಟ್, ಪಾಸಿಟಿವಿಟಿ ದರ 1 ರಿಂದ 2ರಷ್ಟು ಇದ್ದರೆ ಆರೆಂಜ್ ಅಲರ್ಟ್, ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದ್ದರೆ ರೆಡ್ ಅಲರ್ಟ್. ಹೀಗೆ ಕಲರ್ ಕೋಡ್ ಆಧಾರದ ಮೇಲೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ಹೇರಲು ಸೂಚನೆ ನೀಡಲಾಗಿದೆ, ಇದೇ ಮಾದರಿಯನ್ನ ದೆಹಲಿಯಲ್ಲೂ ಅಳವಡಿಸಲಾಗಿದೆ.
ಈಗಾಗಲೇ ದೆಹಲಿ, ಮುಂಬೈ, ಚೆನ್ನೈ ನಲ್ಲಿ ಸೋಂಕಿನ ತೀವ್ರತೆ ಹೆಚ್ಚಳವಾಗಿದೆ. ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ದಿಡೀರ್ ಏರಿಕೆಯಾಗಿದೆ. ಅದ್ರಲ್ಲು ರಾಜಧಾನಿ ಬೆಂಗಳೂರಿನಲ್ಲಿ 800 ಕೇಸ್ ಗಳು ಪತ್ತೆಯಾಗಿವೆ. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ರಾಜ್ಯಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಡೆಲ್ಟಾದಿಂದ ಎರಡನೇ ಅಲೆಯ ತೀವ್ರತೆಯನ್ನ ಎದುರಿಸಿದ್ದ ಜನರಿಗೆ, ಒಮಿಕ್ರಾನ್ ಮತ್ತಷ್ಟು ಮಾರಕವಾಗಲಿದೆ, ಹೀಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ ಎಂದು ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಶಿಫಾರಸು ನೀಡಿದೆ.
ಜೊತೆಗೆ ನಿತ್ಯ 75,000 ಆರ್ ಟಿಪಿಸಿಆರ್ ಹಾಗೂ RAT ಮೂಲಕ ಶೇ.30 ರಷ್ಟು ಪರೀಕ್ಷೆ ಮಾಡಬೇಕು.ಕೊರೋನಾ ಕ್ಲಸ್ಟರ್‌ಗಳಿಂದ ಶೇ.30 ಎಲ್ಲಾ ಮಾದರಿಗಳನ್ನ ಕಡ್ಡಾಯವಾಗಿ ಜಿನೋಮ್ ಸೀಕ್ವೇನ್ಸಿಂಗ್ ಕಳುಹಿಸಬೇಕು. ಎಲ್ಲಾ ವಸತಿ ಶಾಲೆಗಳು, ಹಾಸ್ಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು ಮತ್ತು ಜನಸಂದಣಿ ಇರುವ ಇತರ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲಿಸಬೇಕು. ನಿಯಮ ಪಾಲನೆಯಾಗ್ತಿದೆ ಎಂದು ಪರಿಶೀಲಿಸಲು ಮಾರ್ಷಲ್ ಗಳು ಹಾಗೂ ಪೊಲೀಸರನ್ನ ನೇಮಕ ಮಾಡಿ ಕ್ರಮ ಜರುಗಿಸಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಮುಖ್ಯವಾಗಿ ಆಸ್ಪತ್ರೆಗಳು ಸಜ್ಜಾಗಿರಲಿ ಎಂಬ ಸಲಹೆ ನೀಡಿದೆ.