ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೌನವ್ರತಕ್ಕೆ ಟಾಂಗ್ ನೀಡಿರುವ ಸಚಿವ ಅಶ್ವತ್ಥನಾರಾಯಣ, ಮಾತನಾಡಿದರೆ ಸಿಕ್ಕಿ ಹಾಕಿಕೊಳ್ತಾರೆ ಅದ್ಕೆ ಮೌನವಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿನಿಂದ ಮೂರು ದಿನಗಳ ಕಾಲ ಮೌನವಾಗಿ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಮೂರು ದಿನ ಪ್ರತಿಕ್ರಿಯೆ ನೀಡಲ್ಲ. ಮೌನ ನಡಿಗೆ ನಡೆಯುತ್ತೇನೆ ಎಂದಿದ್ದಾರೆ.
ಡಿ.ಕೆ.ಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಅಶ್ವತ್ಥನಾರಾಯಣ, ಅವರು ಏನೇ ಮಾತನಾಡಿದರೂ ಅವರೇ ಸಿಕ್ಕಿ ಹಾಕಿಕೊಳ್ತಿದ್ದಾರೆ. ಅದಕ್ಕೆ ಬಚಾವ್ ಆಗಲು ಮೌನ ವ್ರತ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಶಾಸಕ ರೇಣುಕಾಚಾರ್ಯ ಪಾಲ್ಗೊಂಡಿದ್ದ ಕಾರ್ಯಕ್ರಮದ ಬಗ್ಗೆ ಸಮರ್ಥಿಸಿಕೊಂಡಿರುವ ಸಚಿವರು, ರೇಣುಕಾಚಾರ್ಯ ಅವರಾಗಿಯೇ ಯಾವುದೇ ಕಾರ್ಯಕ್ರಮ ಆಯೋಜಿಸಿರಲಿಲ್ಲ, ಬೇರೆ ಯಾರೋ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗಿದ್ದರು. ಅದಕ್ಕೆ ಅವರು ಕ್ಷಮೆಯಾಚಿಸಿದ್ದಾರೆ. ಮುಂದೆ ಜವಾಬ್ದಾರಿಯಿಂದ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರಂತೆ ನಾವು ಮಾಡಿದ್ದೇ ಸರಿ ಎಂದು ಭಂಡತನಕ್ಕೆ ಬಿದ್ದಿಲ್ಲ ಎಂದು ಹೇಳಿದ್ದಾರೆ.