
ಸ್ವ್ಯಾಬ್ ಸಂಗ್ರಹಿಸಲು ಬಂದಿದ್ದ ಜಿಲ್ಲಾ ಆರೋಗ್ಯಾಧಿಕಾರಿಯ ಜೊತೆಯಲ್ಲಿ ವಾಗ್ವಾದಕ್ಕಿಳಿದ ಡಿ.ಕೆ. ಶಿವಕುಮಾರ್, ನಾನು ಫಿಟ್ & ಫೈನ್ ಆಗಿದ್ದೇನೆ, ನನಗೆ ಯಾವುದೇ ಪರೀಕ್ಷೆಯ ಅಗತ್ಯವಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಇವರೆಲ್ಲ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಪಾದಯಾತ್ರೆ ಹೆಸರಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಈ ಹಿಂದೆಯೇ ಎಚ್ಚರಿಕೆ ನೀಡಿದ್ದಾರೆ.
ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ. ಡಿ.ಕೆ. ಶಿವಕುಮಾರ್ ಕೆಮ್ಮುತ್ತಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ನ್ನು ಸೂಪರ್ಸ್ಪ್ರೆಡ್ಡರ್ ಎಂದು ಜರಿದಿದೆ. ಮೇಕೆದಾಟು ಪಾದಯಾತ್ರೆ ವೇಳೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಮ್ಮುತ್ತಿರೋದನ್ನು ನೋಡಿದರೆ ಅವರಿಗೆ ಕೋವಿಡ್ ಲಕ್ಷಣ ಇರುವಂತೆ ಕಾಣುತ್ತಿದೆ. ಆದರೆ ಡಿ.ಕೆ. ಶಿವಕುಮಾರ್ ಮಾತ್ರ ಮಾಸ್ಕ್ ಕೂಡ ಧರಿಸದೇ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಂವಹನ ನಡೆಸುತ್ತಿದ್ದಾರೆ. ಕೊರೊನಾ ಪ್ರಕರಣ ಹೆಚ್ಚಲು ಡಿಕೆಶಿ ಕಾರಣರಾಗುತ್ತಿದ್ದಾರಾ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ.