ಕೊಪ್ಪಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಹೆಚ್ ಡಿ.ಕುಮಾರಸ್ವಾಮಿಯವರನ್ನು ಸಚಿವ ಹಾಲಪ್ಪ ಆಚಾರ್, ಹಾಡಿ ಹೊಗಳಿದ್ದು, ಅಚ್ಚರಿಗೆ ಕಾರಣವಾಗಿದೆ.
ಕೊಪ್ಪಳದ ಯಲಬುರ್ಗಾದಲ್ಲಿ ಮಾತನಾಡಿದ ಗಣಿ ಸಚಿವ ಹಾಲಪ್ಪ ಆಚಾರ್, ನೀರಾವರಿ ಯೋಜನೆಗಳಿಗಾಗಿ ಹೋರಾಟ ನಡೆಸಿದ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಕೆಲಸಗಳನ್ನು ಜನರು ಮೆಚ್ಚಲೇಬೇಕು. ಇದರಲ್ಲಿ ಅತಿಶಯೋಕ್ತಿಯಿಲ್ಲ ಎಂದರು.
5 ವರ್ಷ ಅಧಿಕಾರದಲ್ಲಿದ್ದಾಗ ಏತನೀರಾವರಿಗೆ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಜನರ ಸಮಸ್ಯೆಗಳನ್ನು ಆಲಿಸಲೂ ಇಲ್ಲ. ಇಂದು ವೇದಿಕೆ ಮೇಲೆ ಬಂದು ಭಾಷಣ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಇಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ನಾನು ನೆನೆಯುತ್ತೇನೆ. ಅವರು ಜೆಡಿಎಸ್, ಕಾಂಗ್ರೆಸ್ ನವರೇ ಇರಬಹುದು. ಆದರೆ ಒಳ್ಳೆಯ ಕೆಲಸವನ್ನು ಮಾಡಿದರೆ ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಸಂಸ್ಕೃತಿ. ಅನಗತ್ಯವಾಗಿ ಧಿಮಾಕಿನ, ಡೊಂಬಾಚಾರದ ಮಾತನಾಡುವುದು ಬೇಕಿಲ್ಲ. ನೀರಾವರಿ ಯೋಜನೆಗೆ 1700 ಕೋಟಿ ಕೊಟ್ಟಿದ್ದಾರೆ. ಹಾಗಾಗಿ ಅವರನ್ನು ಶ್ಲಾಘಿಸಿದರೆ ತಪ್ಪಿಲ್ಲ ಎಂದು ಹೊಗಳಿದ್ದಾರೆ.