ಭಾರತೀಯ ಜಾಗತಿಕ ಸಮಾವೇಶದ ಎರಡನೇ ಯುಎಇ ಆವೃತ್ತಿ, ದುಬೈನಲ್ಲಿ ನಡೆಯುತ್ತಿದೆ. ಎರಡು ದಿನಗಳ ಈ ಸಮಾವೇಶದಲ್ಲಿ ನಡೆದ ಚರ್ಚೆಯಲ್ಲಿ ಫಿನ್ಟೆಕ್, ಮೆಟಾವರ್ಸ್, ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ, ಸಾಮಾಜಿಕ ಜಾಲತಾಣ ಮಾಧ್ಯಮದ ಭವಿಷ್ಯ ಈ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಕೇಂದ್ರ ಐಟಿ, ಉದ್ಯಮಶೀಲತೆ, ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಚರ್ಚೆಯಲ್ಲಿ ಪಾಲ್ಗೊಂಡು ಭಾರತದ ಡಿಜಿಟಲ್ ಆರ್ಥಿಕತೆ ಮತ್ತು ಯುಎಇ ಜೊತೆಗೆ ಪಾಲುದಾರಿಕೆ ಬಗ್ಗೆ ತಮ್ಮ ದೃಷ್ಟಿಕೋನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ತಿಳಿಯಪಡಿಸುತ್ತಾ, ಈ ಕ್ಷೇತ್ರದಲ್ಲಿ ಹಿಂದುಳಿದ ರಾಷ್ಟ್ರಗಳಿಗೆ ನೆರವು ನೀಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಪ್ರತಿಪಾದಿಸಿದರು. ಭಾರತ – ಯುಎಇ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡುತ್ತಾ ಈ ಹೊಸ ಒಪ್ಪಂದದಿಂದ ನವೋದ್ಯಮ, ವಾಣಿಜ್ಯೋದ್ಯಮ, ಆವಿಷ್ಕಾರ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇನ್ನಷ್ಟು ಬಲಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಚರ್ಚೆಯಲ್ಲಿ ಯುಎಇ ಯ ಆರ್ಟಿಫಿಷಿಯಲ್ ತಂತ್ರಜ್ಞಾನ, ಡಿಜಿಟಲ್ ಎಕಾನಮಿ ಮತ್ತು ರಿಮೋಟ್ ವರ್ಕ್ ಅಪ್ಲಿಕೇಶನ್ ಮಂತ್ರಿಗಳಾದ ಉಮರ್ ಬಿನ್ ಸುಲ್ತಾನ್ ಅಲ್ ಒಲಾಮ ಪಾಲ್ಗೊಂಡು ಭಾರತದಂತಹ ದೈತ್ಯ ದೇಶವು ಕೇವಲ ಒಂದು ದಶಕದ ಅವಧಿಯಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರುವ ಬಗ್ಗೆ ಶ್ಲಾಘಿಸಿದರು.
ಇಂಡಿಯಾ ಗ್ಲೋಬಲ್ ಫೋರಮ್ ನ ಸಂಸ್ಥಾಪಕರಾದ ಪ್ರೊ. ಮನೋಜ್ ಲಾಡ್ವ ಮಾತನಾಡಿ ಈ ಸಮಾವೇಶವು ವಿಶ್ವದ ಉದ್ಯಮ ತಜ್ಞರು ಮತ್ತು ಚಿಂತಕರ ಒಂದು ಉತ್ತಮ ವೇದಿಕೆಯಾಗಿದ್ದು ಇದರಿಂದ ತಂತ್ರಜ್ಞಾನದ ವಲಯದಲ್ಲಿ ಅತ್ಯುತ್ತಮ ಬೆಳವಣಿಗೆಯನ್ನು, ಪ್ರಗತಿಯನ್ನು ನಿರೀಕ್ಷಿಸಬಹುದು ಎಂದು ಹೇಳಿದರು.