ನಗರ ಸ್ಥಳೀಯ ಚುನಾವಣೆಯ ಸಂದರ್ಭದಲ್ಲಿ ಡಿಎಂಕೆ ಪರ ಪ್ರಚಾರ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದ ರೋಮೆನಿಯಾ ಪ್ರಜೆಯ ವಿರುದ್ಧ ವೀಸಾ ಉಲ್ಲಂಘನೆಯ ಆರೋಪ ಎದುರಾಗಿದೆ. ಬ್ಯುರೋ ಆಫ್ ಇಮಿಗ್ರೇಷನ್ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ವ್ಯಾಪಾರ ವೀಸಾ (ಇ-ವೀಸಾ) ಹೊಂದಿರುವ ನೆಗೋಯಿಟಾ ಸ್ಟೀಫನ್ ಮಾರಿಯಸ್ ಅವರನ್ನು ತನ್ನ ಮೂಲ ದಾಖಲೆಗಳೊಂದಿಗೆ ಇಂದು ಕಚೇರಿಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ . ಅಲ್ಲದೇ ವೀಸಾಗೆ ಸಂಬಂಧಿಸಿಲ್ಲದ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವಿವರಣೆಯನ್ನು ನೀಡುವಂತೆ ನೋಟಿಸ್ನಲ್ಲಿ ಕೇಳಲಾಗಿದೆ. ಭಾರತ ಭೇಟಿಯ ಉದ್ದೇಶವನ್ನು ಉಲ್ಲಂಘಿಸಿರುವುದು ಸಾಬೀತಾದಲ್ಲಿ ವಿದೇಶಿಯರ ಕಾಯ್ದೆ 1946ರ ಸೆಕ್ಷನ್ 14ರ ಅಡಿಯಲ್ಲಿ ಕಾನೂನು ಕ್ರಮಕ್ಕೆ ಹೊಣೆಯಾಗಬೇಕಾಗುತ್ತದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ತಮಿಳುನಾಡಿಗೆ ಬ್ಯುಸಿನೆಸ್ ಟ್ರಿಪ್ಗೆಂದು ಬಂದಿದ್ದ ಮಾಯಿಯಸ್ ಕೊಯಮತ್ತೂರಿನಲ್ಲಿ ಸ್ಥಳೀಯ ಬಸ್ ಹತ್ತಿದ್ದರು. ಇಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ ಮಾರಿಯಸ್ ಬಳಿಕ ಮಹಿಳೆಯರಿಗೆ ಉಚಿತ ಪ್ರಯಾಣ ಸರ್ಕಾರದ ಯೋಜನೆ ಎಂದು ತಿಳಿದು ಸಂತೋಷ ವ್ಯಕ್ತಪಡಿಸಿದ್ದರು.
ಮಾರಿಯಸ್ ಅವರ ಸ್ನೇಹಿತ, ಡಿಎಂಕೆ ನಾಯಕ ಡಾ ಗೋಕುಲ್ ಕಿರುಬಾ ಶಂಕರ್ ಈ ವಿಚಾರವಾಗಿ ಮಾತನಾಡಿದ್ದು, ಮಾರಿಯಸ್ ಗಾರ್ಮೆಂಟ್ ಫ್ಯಾಕ್ಟರಿಗಳಿಗೆ ಭೇಟಿ ನೀಡಲು ಕೊಯಮತ್ತೂರು ಮತ್ತು ತಿರುಪ್ಪೂರ್‌ಗೆ ಭೇಟಿ ನೀಡುತ್ತಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಯಾವಾಗಲೂ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುತ್ತಿದ್ದರು. ಹೀಗಿರುವಾಗ ಒಮ್ಮೆ ಅವರು ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಪ್ರಯಾಣಿಸುತ್ತಿದ್ದಾಗ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೋಡಿ ಆಶ್ಚರ್ಯವಾಯಿತು. ಅವರು ನನಗೆ ಕರೆ ಮಾಡಿದರು ಮತ್ತು ನಾನು ಯೋಜನೆಯ ಬಗ್ಗೆ ಹೇಳಿದೆ. ನಂತರ ಅವರು ನಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಬಹುದೇ ಎಂದು ಕೇಳಿದರು, ನಾನು ಒಪ್ಪಿದೆ ಮತ್ತು ನಂತರ ಅವರನ್ನು ನಮ್ಮ ಸದಸ್ಯರಿಗೆ ಪರಿಚಯಿಸಿದೆ ಮತ್ತು ಅವರು ಬಸ್ ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಚಾರ ಮಾಡಲು ಪ್ರಾರಂಭಿಸಿದರು. ಅವರ ಪ್ರಚಾರ ಇಷ್ಟು ವೈರಲ್ ಆಗಲಿದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಈಗ ಅವರು ಬ್ಯೂರೋ ಆಫ್ ಇಮಿಗ್ರೇಷನ್‌ನಿಂದ ತಮ್ಮ ಕಚೇರಿಯಲ್ಲಿ ಹಾಜರಾಗುವಂತೆ ನೋಟಿಸ್ ಪಡೆದಿದ್ದಾರೆ. ಹಾಗಾಗಿ ಅವರು ಸ್ವಲ್ಪ ಚಿಂತಿತರಾಗಿದ್ದಾರೆ ಎಂದು ಹೇಳಿದರು.