ಇಂದು ಕನ್ನಡದ ಕಣ್ಮಣಿ, ವರನಟ ಡಾ. ರಾಜ್ ಅವರ ಜನ್ಮದಿನ. ಮುತ್ತುರಾಜನನ್ನು ನೆನಪಿಸಿಕೊಳ್ಳುವ ಈ ದಿನ ಆ ಮುತ್ತನ್ನು ಸದಾ ಜೋಪಾನವಾಗಿಟ್ಟುಕೊಂಡಿದ್ದ ಅವರ ಮುತ್ತಿನಂಥ ಮಡದಿ ಪಾರ್ವತಮ್ಮನವರನ್ನು ಸಹ ಖಂಡಿತಾ ಸ್ಮರಿಸಬೇಕು. ಏಕೆಂದರೇ ಡಾ. ರಾಜ್ ಅವರ ಕಲಾಕೀರ್ತಿ ಒಂದು ತೂಕದ್ದಾದರೆ, ಪಾರ್ವತಮ್ಮನವರ ವ್ಯಕ್ತಿತ್ವ ಇನ್ನೊಂದು ತೂಕದ್ದು. ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವ ಮಾತನ್ನು ನಿಜ ಮಾಡಿದವರು ಪಾರ್ವತಮ್ಮನವರು. ಈ ನಿಟ್ಟಿನಲ್ಲಿ ಈ ಭಾಗ್ಯವಂತ ದಂಪತಿಗಳಿಂದ ಕಲಿಯಲೇಬೇಕಾದ ಬದುಕಿನ ಪಾಠಗಳು ಇಲ್ಲಿವೆ.
ಹೆತ್ತವರ ಮಾತಿಗೆ ಮನ್ನಣೆ ನೀಡುವುದು : ಡಾ. ರಾಜ್ಕುಮಾರ್ ಅವರು ಪಿತೃವಾಕ್ಯ ಪರಿಪಾಲಕರು. ಅದರಂತೆಯೇ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಮಾತಿನಂತೆ ಪಾರ್ವತಮ್ಮನವರನ್ನು ವಿವಾಹವಾದರು. ಆ ನಂತರದ್ದೆಲ್ಲ ಈಗ ಸುವರ್ಣ ಇತಿಹಾಸ.
ಇದೇ ರೀತಿಯಲ್ಲಿ ಪಾರ್ವತನಮ್ಮನವರು ಕೂಡ ತಮ್ಮ ತಂದೆ ಮಾತಿನಂತೆಯೇ ಓದನ್ನು ಬಿಟ್ಟು ಡಾ. ರಾಜ್ ಅವರ ಮನೆಯ ಸೊಸೆಯಾದರು. ಎಂದಿಗೂ ನಿನ್ನ ಮನೆಯ ಸಮಸ್ಯೆಯನ್ನು ತವರು ಮನೆಗೆ ತರಲೇಬೇಡ. ಅದನ್ನು ನೀನೇ ನಿಭಾಯಿಸಬೇಕು ಎಂದು ಹೇಳಿದ್ದ ತಂದೆಯ ಮಾತನ್ನೇ ಪಾಲಿಸಿ ಮಾದರಿ ಮಡದಿ ಮತ್ತು ಸೊಸೆಯಾದರು.
ಪರಸ್ಪರ ಸಹಕಾರ : ಪಾರ್ವತಮ್ಮನವರು, ಡಾ. ರಾಜ್ಕುಮಾರ್ ಅವರ ಉಡುಗೆ – ತೊಡುಗೆ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದರು. ರಾಜ್ಕುಮಾರ್ರವರು ಕೂಡ ಎಂದಿಗೂ ತಮ್ಮ ಮಡದಿಯ ಕಾರ್ಯ ಕ್ಷಮತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಲಿಲ್ಲ. ಅವರಿಗೆ ಸಹಕಾರ ನೀಡುವ ಮೂಲಕ ಇಬ್ಬರೂ ಕೂಡ ಜೊತೆ ಜೊತೆಯಲ್ಲೇ ಬೆಳೆಯುವಂತೆ ಜೊತೆಯಾಗಿ ನಿಂತರು.
ಡಾ. ರಾಜ್ರವರ ಸರಳತೆ ಮತ್ತು ಪಾರ್ವತಮ್ಮನವರ ವ್ಯವಹಾರ ಪ್ರಜ್ಞೆ : ಡಾ ರಾಜ್ರವರು ಎಂದಿಗೂ ತಮ್ಮ ಜೇಬಲ್ಲಿ ಒಂದು ರೂಪಾಯಿಯನ್ನು ಇಟ್ಟುಕೊಂಡವರಲ್ಲ. ಸಿನಿಮಾಗಳಲ್ಲೂ ಅಭಿನಯಿಸಿ ಬರುತ್ತಿದ್ದರೂ ಸಹ ತಮ್ಮ ದುಡಿಮೆಯ ಹಣದ ಬಗ್ಗೆ ಹೆಚ್ಚು ಗಮನ ಹರಿಸಿದವರಲ್ಲ. ಈ ಕಾರಣದಿಂದ ಸಂಭಾವನೆ ವಿಷಯದಲ್ಲೂ ಸಾಕಷ್ಟು ಸಮಸ್ಯೆಯಾಗುತ್ತಿದ್ದವು.
ಇತ್ತ ಪಾರ್ವತಮ್ಮನವರು ಡಾ. ರಾಜ್ ಅವರ ಪ್ರತಿಭೆಯ ಆಳವನ್ನು ಅರ್ಥ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಅವರಿಗೆ ಸರಿಯಾದ ನ್ಯಾಯ ಸಲ್ಲಬೇಕು ಎಂದು ತಾವೇ ಸಿನಿಮಾಗಳನ್ನು ನಿರ್ಮಿಸಲು ವಜ್ರೇಶ್ವರಿ ಸಂಸ್ಥೆ ಆರಂಭಿಸಿದರು.
ಪತಿಯ ಸ್ಮರಣೆಯೇ ಪಾರ್ವತಮ್ಮನವರ ಶಕ್ತಿ : ಪಾರ್ವತಮ್ಮನವರು ಸದಾಕಾಲ ಡಾ. ರಾಜ್ ಅವರ ಬೆಂಬಲವಾಗಿಯೇ ನಿಲ್ಲುತ್ತಿದ್ದರು. ಅದು ಎಷ್ಟರ ಮಟ್ಟಿಗೆ ಎಂದರೆ ಡಾ. ರಾಜ್ ಅವರು ಯೋಗ ಮಾಡಬೇಕಾದರೂ ಪಾರ್ವತಮ್ಮನವರು ಅವರ ಕಾಳಜಿ ಮಾಡಿ, ಬೇಕು- ಬೇಡಗಳನ್ನು ನೋಡಿಕೊಳ್ಳುತ್ತಿದ್ದರು.
ಕುಟುಂಬವೇ ಶಕ್ತಿ : ಡಾ. ರಾಜ್ ಮತ್ತು ಪಾರ್ವತಮ್ಮನವರು ತಮ್ಮ ಮನೆಯಲ್ಲಿ ಹಿರಿಯರು, ಕಿರಿಯರೊಟ್ಟಿಗೆ ಬದುಕು ಸವೆಸಿದವರು. ಎಂದಿಗೂ ತಾವು ವೈಭವಯುತ ಜೀವನ ನಡೆಸಬೇಕೆಂದು ಅವಿಭಕ್ತ ಕುಟುಂಬದಿಂದ ಹೊರ ಬಂದವರಲ್ಲ. ಎಲ್ಲರನ್ನೂ ತಮ್ಮೊಟ್ಟಿಗೆ ನಡೆಸಿಕೊಂಡು ಬಂದ ಅಪರೂಪದ ದಂಪತಿ. ಈ ಕಾರಣದಿಂದಲೇ ಡಾ. ರಾಜ್ ಮತ್ತು ಪಾರ್ವತಮ್ಮನವರ ಯಶಸ್ಸಿನ ಹಿಂದೆ ಅವರ ಕುಟುಂಬವೂ ಕೂಡ ಪ್ರೇರಕ ಶಕ್ತಿಯಾಗಿದೆ ಎಂದರೆ ಅದು ಅತಿಶಯೋಕ್ತಿಯಲ್ಲ.