ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ಕಳೆದ 15 ವರ್ಷಗಳ ಹಿಂದೆ ರೂಪಾಯಿ ಮೌಲ್ಯ 38 ಇತ್ತು. ಈಗ 80ಕ್ಕೆ ಕುಸಿದಿದೆ. ಸಮೀಕ್ಷೆಯ ಪ್ರಕಾರ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಪ್ರತಿ ನಾಲ್ವರು ಭಾರತೀಯರ ಪೈಕಿ ಮೂವರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.
ಕಳೆದ ವಾರ ರೂಪಾಯಿ, ಯುಎಸ್ ಡಾಲರ್ ಎದುರು ತನ್ನ ಸಾರ್ವಕಾಲಿಕ ಕನಿಷ್ಠ ವಿನಿಮಯ ದರ 80ನ್ನು ದಾಟಿದೆ. ರೂಪಾಯಿ ಮೌಲ್ಯದ ಕುಸಿತವನ್ನು ಗಮನಿಸಿದರೆ, ಕಳೆದ 15 ವರ್ಷಗಳಲ್ಲಿ ಸಾಪೇಕ್ಷ ಆರ್ಥಿಕ ಪರಿಭಾಷೆಯಲ್ಲಿ ಭಾರತದ ಕಾರ್ಯಕ್ಷಮತೆಯನ್ನು ಹೇಗೆ ನೋಡುತ್ತಾರೆ, ಅವರ ಜೀವನದ ಮೇಲೆ ರೂಪಾಯಿಯ ಪ್ರಭಾವದ ದುರ್ಬಲತೆಯ ಬಗ್ಗೆ ಕಳವಳವಿದೆಯೇ ಎಂಬ ಬಗ್ಗೆ ನಾಗರಿಕರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆಯಲ್ಲಿ ಪ್ರಯತ್ನಿಸಲಾಗಿದೆ.
ದೇಶದ 328 ಜಿಲ್ಲೆಗಳಲ್ಲಿ ನೆಲೆಗೊಂಡಿರುವ ನಾಗರಿಕರಿಂದ 34,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ ಶೇ.65ರಷ್ಟು ಮಂದಿ ಪುರುಷರು ಮತ್ತು ಶೇ.35ರಷ್ಟು ಮಹಿಳೆಯರಿಂದ ಪ್ರತಿಕ್ರಿಯೆ ಪಡೆಯಲಾಗಿದೆ. 2007 ರಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 38 ಇತ್ತು, ಈಗ 80 ದಾಟಿದೆ.
ಡಾಲರ್ ಸೂಚ್ಯಂಕವು ಈ ವರ್ಷ ಆರು ಪ್ರಮುಖ ಕರೆನ್ಸಿಗಳಾದ ಯೂರೋ, ಪೌಂಡ್, ಯೆನ್, ಸ್ವಿಸ್ ಫ್ರಾಂಕ್, ಕೆನಡಿಯನ್ ಡಾಲರ್ ಮತ್ತು ಸ್ವೀಡಿಷ್ ಕ್ರೋನಾ ವಿರುದ್ಧ ಶೇ.13ರಷ್ಟು ಹೆಚ್ಚಳವಾಗಿರುವುದರಿಂದ ಭಾರತೀಯ ರೂಪಾಯಿಗೆ ಹೊಡೆತ ಬಿದ್ದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾ- ಉಕ್ರೇನ್ ಯುದ್ಧ ಕೂಡ ಈ ಕುಸಿತಕ್ಕೆ ಕಾರಣ. ಆರ್‌ಬಿಐ ಕೂಡ ವಿದೇಶಿ ವಿನಿಮಯ ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರೂಪಾಯಿ ಮೌಲ್ಯ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ.
ಪೆಟ್ರೋಲ್ ಬೆಲೆ ಏರಿಕೆ ಕೂಡ ಜನಸಾಮಾನ್ಯರ ಕಳವಳಕ್ಕೆ ಕಾರಣವಾಗಿದೆ. ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವೂ ಸಹ ಸಾಕಷ್ಟು ಪರಿಣಾಮ ಬೀರಿದೆ. ರೂಪಾಯಿ ಮೌಲ್ಯದ ಮತ್ತಷ್ಟು ಕುಸಿತ ಮುಂದಿನ ಐದು ವರ್ಷಗಳಲ್ಲಿ ತಮ್ಮ ಅಥವಾ ಕುಟುಂಬದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಶೇ.18ರಷ್ಟು ಜನರು ಭಾವಿಸಿದ್ದಾರೆ. ಆದರೆ ಶೇ.6ರಷ್ಟು ಜನರು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಸಾರಿಗೆ ವೆಚ್ಚ ಹೆಚ್ಚಳ, ಅಡುಗೆ ಇಂಧನ ವೆಚ್ಚಗಳು, ಅಗತ್ಯ ಉತ್ಪನ್ನಗಳ ಬೆಲೆ ಏರಿಕೆ ಮತ್ತು ಸೇವೆಗಳ ವೆಚ್ಚದಿಂದ ಪರಿಣಾಮ ಉಂಟಾಗಲಿದೆ ಎಂದು ಶೇ.52ರಷ್ಟು ಜನರು ನಿರೀಕ್ಷಿಸುತ್ತಾರೆ.
ಸರಕು ಮತ್ತು ಸೇವೆಗಳು, ವಿಶೇಷವಾಗಿ ಆರೋಗ್ಯ ಮತ್ತು ಔಷಧಗಳು ದುಬಾರಿಯಾಗಬಹುದು ಎಂದು ನಿರೀಕ್ಷಿಸುತ್ತಾರೆ. ಶೇ.44ರಷ್ಟು ಜನರು ಸಾಗರೋತ್ತರ ಪ್ರಯಾಣದ ವೆಚ್ಚ ಏರಿಕೆಯಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಾಗರೋತ್ತರ ಶಿಕ್ಷಣ ಯೋಜನೆಗಳ ಮೇಲೆ ಸಹ ಇದು ಪರಿಣಾಮ ಬೀರಲಿದೆ. ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಮುಂಬರುವ ವರ್ಷಗಳಲ್ಲಿ ಹಲವಾರು ಪ್ರಮುಖ ಸರಕು ಮತ್ತು ಸೇವೆಗಳ ಬೆಲೆಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.