ಭಾರತದ ರೂಪಾಯಿ ಮೌಲ್ಯ ಮತ್ತೆ ಕುಸಿದಿದೆ. ಇಂದು ವಹಿವಾಟು ಆರಂಭವಾಗುತ್ತಿದ್ದಂತೆ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 79.55 ರಷ್ಟಾಗಿತ್ತು. ಈ ಮೂಲಕ ಅತ್ಯಂತ ಕನಿಷ್ಠ ಮೌಲ್ಯವನ್ನು ರೂಪಾಯಿ ದಾಖಲಿಸಿದೆ.
ನಿನ್ನೆ ವಹಿವಾಟು ಅಂತ್ಯಕ್ಕೆ ರೂಪಾಯಿ ಮೌಲ್ಯ 79.44 ರಷ್ಟಿತ್ತು. ದಾಖಲೆಯ ಮುಕ್ತಾಯದ ನಂತರ ಮತ್ತಷ್ಟು ಕುಸಿತ ಕಂಡಿದೆ. ಡಾಲರ್ನಲ್ಲಿನ ಸಾಮರ್ಥ್ಯ ಮತ್ತು ದೇಶೀಯ ಷೇರುಗಳಲ್ಲಿನ ದೌರ್ಬಲ್ಯವು ರೂಪಾಯಿಯ ಮೇಲೆ ಒತ್ತಡವನ್ನುಂಟು ಮಾಡಿದೆ. ಆದರೂ ತೈಲ ದರ ಕೊಂಚ ನಿಯಂತ್ರಣದಲ್ಲಿರುವುದರಿಂದ ರೂಪಾಯಿಗೆ ಬೆಂಬಲ ಸಿಕ್ಕಂತಾಗಿದೆ.
ಚೀನಾ ಹೊಸ COVID-19 ನಿರ್ಬಂಧಗಳನ್ನು ಜಾರಿ ಮಾಡಿರುವುದರಿಂದ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗಿದೆ. ಬ್ರೆಂಟ್ ಫ್ಯೂಚರ್ಸ್ ಬ್ಯಾರೆಲ್ಗೆ ಶೇ.3.2ರಷ್ಟು ಕುಸಿದು 103.6 ಡಾಲರ್ ಆಗಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಫ್ಯೂಚರ್ಸ್ ಕೂಡ ಬ್ಯಾರೆಲ್ಗೆ 1.8 ಪ್ರತಿಶತದಷ್ಟು ಕುಸಿತದೊಂದಿಗೆ102.2 ಡಾಲರ್ಗೆ ತಲುಪಿದೆ. ಡಾಲರ್ ಸೂಚ್ಯಂಕ ಎರಡು ದಶಕಗಳಲ್ಲೇ ಗರಿಷ್ಠ ಮಟ್ಟ ತಲುಪಿದ್ದು, 108.3ರಷ್ಟಾಗಿದೆ.
ಅಮೆರಿಕದಲ್ಲಿ ಉದ್ಯೋಗಸೃಷ್ಟಿ ಇನ್ನಷ್ಟು ವೇಗ ಪಡೆದುಕೊಂಡಿರುವುದರಿಂದ ಆರ್ಥಿಕತೆ ಮೇಲೆ ಪ್ರಭಾವ ಉಂಟಾಗಿದೆ. ಇದು ಡಾಲರ್ ಸೂಚ್ಯಂಕವನ್ನು ಮೇಲ್ಮುಖ ಪಥದಲ್ಲಿ ತಳ್ಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯದಲ್ಲೇ ರೂಪಾಯಿ ಮೌಲ್ಯ 80ಕ್ಕೆ ಬಂದು ನಿಲ್ಲಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ತೈಲ ಬೆಲೆ ಇಳಿಕೆ ನಡುವೆಯೂ ನಿನ್ನೆ ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಂಡಿತ್ತು.