ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಪ್ರಸಿದ್ಧ ಡಾನ್ಸರ್ ಸಪ್ನಾ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ರದ್ದಾಗಿದ್ದ ಡಾನ್ಸ್ ಕಾರ್ಯಕ್ರಮವೊಂದರ ಟಿಕೆಟ್ ಹಣವನ್ನು ಮರುಪಾವತಿಸದೇ ಇರುವ ಕಾರಣಕ್ಕೆ ಸಪ್ನಾ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಲಖ್ನೋ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದು, ಸಪ್ಟೆಂಬರ್ 30ಕ್ಕೆ ಮುಂದಿನ ವಿಚಾರಣೆಯಿದೆ. 2021ರ ನವೆಂಬರ್‌ನಲ್ಲೂ ಲಖ್ನೋ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಕೋರ್ಟ್‌ಗೆ ಹಾಜರಾಗಿದ್ದ ಸಪ್ನಾ, ಜಾಮೀನು ಪಡೆದುಕೊಂಡಿದ್ರು.
ಸೋಮವಾರ ಸಪ್ನಾ ಕೋರ್ಟ್‌ಗೆ ಹಾಜರಾಗಬೇಕಿತ್ತು. ಆದ್ರೆ ಆಕೆ ಗೈರಾಗಿದ್ದಾಳೆ, ನ್ಯಾಯಾಲಯದಿಂದ ವಿನಾಯಿತಿಯನ್ನೂ ಪಡೆದಿಲ್ಲ. ಇದೇ ಕಾರಣಕ್ಕೆ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. 2018ರ ಅಕ್ಟೋಬರ್ 14ರಂದು ಸಬ್ ಇನ್ಸ್‌ಪೆಕ್ಟರ್ ಫಿರೋಜ್ ಖಾನ್, ಸಪ್ನಾ ಚೌಧರಿ ವಿರುದ್ದ ಎಫ್‌ಐಆರ್ ದಾಖಲಿಸಿದ್ದರು.
ಅಕ್ಟೋಬರ್ 13ರಂದು ಮಧ್ಯಾಹ್ನ 3 ರಿಂದ ರಾತ್ರಿ 10ರವರೆಗೆ ಸ್ಮೃತಿ ಉಪವನದಲ್ಲಿ ಡಾನ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಟಿಕೆಟ್ ಮಾರಾಟ ಮಾಡಲಾಗಿತ್ತು. ಪ್ರತಿ ಟಿಕೆಟ್‌ಗೆ 300 ರೂಪಾಯಿ ವಸೂಲಿ ಮಾಡಲಾಗಿತ್ತು. ಸಾವಿರಾರು ಜನರು ಸಪ್ನಾ ಡಾನ್ಸ್ ನೋಡಲು ಆಗಮಿಸಿದ್ದರು. ಆದ್ರೆ ಸಪ್ನಾ ಚೌಧರಿ ಬರಲೇ ಇಲ್ಲ, ಪ್ರೇಕ್ಷಕರಿಗೆ ಹಣವನ್ನೂ ಮರುಪಾವತಿ ಮಾಡಲಿಲ್ಲ.