ಕೇಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಸಕ್ಕರೆ, ಮೈದಾ ಬಳಸಿ ಮಾಡಿದ ಈ ಕೇಕ್ ತಿನ್ನುವುದು ಎಂದರೆ ಕೆಲವರಿಗೆ ಇಷ್ಟವಾಗಲ್ಲ. ಹಾಗಾಗಿ ಅಂಥವರು ಈ ವಿಧಾನ ಬಳಸಿ ಕೇಕ್ ತಿನ್ನುವ ಆಸೆ ಪೂರೈಸಿಕೊಳ್ಳಿ.
1 ಕಪ್ ಖರ್ಜೂರ ವನ್ನು ಬೀಜ ತೆಗೆದು ½ ಕಪ್ ಹಾಲಿನಲ್ಲಿ ನೆನೆಸಿಕೊಳ್ಳಿ, ನಂತರ ಇದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ. ಇದಕ್ಕೆ ¼ ಕಪ್ ಎಣ್ಣೆ 1 ಟೇಬಲ್ ಸ್ಪೂನ್ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಜರಡಿ ಹಿಡಿದುಕೊಂಡ 1 ಕಪ್ ಗೋಧಿ ಹಿಟ್ಟನ್ನು ಹಾಕಿ ಹಾಗೇ ½ ಟೀ ಸ್ಪೂನ್ ಬೇಕಿಂಗ್ ಪೌಡರ್, ¼ ಟೀ ಸ್ಪೂನ್ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಹಿಟ್ಟು ಗಟ್ಟಿಯಾಗಿದ್ದರೆ ತುಸು ಹಾಲು ಸೇರಿಸಿಕೊಂಡು ಇಡ್ಲಿ ಹಿಟ್ಟಿನ ಹಾಗೇ ಇದನ್ನು ಮಾಡಿಕೊಳ್ಳಿ. ಇದನ್ನು ಕೇಕ್ ಮೌಲ್ಡ್ ಗೆ ಹಾಕಿ ಬೇಕಿದ್ದರೆ ನಿಮಗಿಷ್ಟವಾದ ಡ್ರೈ ಫ್ರೂಟ್ಸ್ ಅನ್ನು ಮೇಲುಗಡೆ ಹಾಕಿ. ಓವೆನ್ ನಲ್ಲಿ 40 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಂಡು ನಂತರ ಸವಿಯಿರಿ.