ದೆಹಲಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ 34 ಒಮಿಕ್ರಾನ್ ರೋಗಿಗಳಲ್ಲಿ, 33 ಜನರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಅದಾಗ್ಯು ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ. ದೆಹಲಿಯ ಲೋಕನಾಯಕ ಆಸ್ಪತ್ರೆಯಲ್ಲಿ ಒಮಿಕ್ರಾನ್ ಸೋಂಕಿಗೆ ಒಳಗಾದ ಒಟ್ಟು 34 ಸೋಂಕಿತರಿದ್ದಾರೆ.
ಒಬ್ಬರನ್ನ ಹೊರತುಪಡಿಸಿ ಇವರೆಲ್ಲರು ಸಂಪೂರ್ಣ ವ್ಯಾಕ್ಸಿನ್ ಪಡೆದವರು, ಅದಕ್ಕೂ ಹೆಚ್ಚಾಗಿ ಇಬ್ಬರು ರೋಗಿಗಳು ಕೊರೊನಾ ವೈರಸ್ ವಿರುದ್ಧ ಬೂಸ್ಟರ್ ಶಾಟ್ ಕೂಡ ಪಡೆದಿದ್ದಾರೆ ಎಂದು ಆಸ್ಪತ್ರೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
34 ಒಮಿಕ್ರಾನ್ ರೂಪಾಂತರದ ರೋಗಿಗಳಲ್ಲಿ 18 ಜನರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಒಬ್ಬ ರೋಗಿಯನ್ನು ಹೊರತುಪಡಿಸಿ, 33 ಸೋಂಕಿತರು ಲಸಿಕೆಗಳನ್ನು ಈ ಹಿಂದೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಸಂಪೂರ್ಣವಾಗಿ ಲಸಿಕೆ ಪಡೆದ ಜನರ ದೇಹ ಹೊಕ್ಕುವ ಸಾಮರ್ಥ್ಯ ಒಮಿಕ್ರಾನ್ ಸೋಂಕಿಗಿದೆ. ಎರಡು ಸಾಮಾನ್ಯ ಲಸಿಕೆ ಡೋಸ್‌ಗಳ ಜೊತೆಗೆ ಇಬ್ಬರು ಅಂತರರಾಷ್ಟ್ರೀಯ ರೋಗಿಗಳು ಎಂಆರ್‌ಎನ್‌ಎ ಬೂಸ್ಟರ್ ಶಾಟ್ ಅನ್ನು ಸಹ ಪಡೆದಿದ್ದಾರೆ, ಆದರು ಒಮಿಕ್ರಾನ್ ಗೆ ತುತ್ತಾಗಿದ್ದಾರೆ ಎಂದು ಲೋಕನಾಯಕ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಲಸಿಕೆಯ ರಕ್ಷಣೆ ಮೀರಿ ದೇಹ ಸೇರುವ ಸಾಮರ್ಥ್ಯವಿರುವ ಸೋಂಕಿನ ಬಗ್ಗೆ ಎಚ್ಚರ ವಹಿಸಲೆಬೇಕು ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ಕೊರೊನಾ ಲಸಿಕೆ ಒದಗಿಸಿದ ರಕ್ಷಣೆಯ ಪರಿಣಾಮವಾಗಿ ರೋಗಿಗಳಲ್ಲಿ ಸೌಮ್ಯವಾದ ರೋಗಲಕ್ಷಣಗಳು ಉಂಟಾಗಬಹುದು ಮತ್ತು ಲಸಿಕೆ ಹಾಕದ ರೋಗಿಗಳಲ್ಲಿ ಈ ರೂಪಾಂತರವು ತೀವ್ರವಾದ ಕಾಯಿಲೆಗೆ ಕಾರಣವಾಗಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.