ಮುಖ ಅಂದವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಕುತ್ತಿಗೆಯ ಕೆಳಭಾಗದಲ್ಲಿ ದಪ್ಪಗಾಗಿದ್ದರೆ ಅದು ನಮ್ಮ ಸೌಂದರ್ಯಕ್ಕೇ ಕುತ್ತು ತರುತ್ತದೆ. ಅದನ್ನು ಡಬಲ್ ಚಿನ್ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಡಬಲ್ ಚಿನ್‌ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ.
ಡಬಲ್ ಚಿನ್ ಎಂದರೆ ದವಡೆಯ ಸುತ್ತಲೂ ಕೊಬ್ಬು ಸಂಗ್ರಹವಾಗುತ್ತದೆ. ಅಧಿಕ ತೂಕ ಡಬಲ್ ಚಿನ್‌ಗೆ ಕಾರಣವಾಗಿರಬಹುದು. ಆದರೆ ಡಬಲ್ ಚಿನ್ ಹೊಂದಿರುವವರೆಲ್ಲ ದಪ್ಪಗಿರುತ್ತಾರೆ ಎಂದರ್ಥವಲ್ಲ. ಸಣ್ಣಗಿರುವವರಲ್ಲೂ ಡಬಲ್ ಚಿನ್ ಸಮಸ್ಯೆ ಇರಬಹುದು. ಈ ಡಬಲ್ ಚಿನ್ ಅನ್ನು ಕಡಿಮೆ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಮೊದಲು ಅದಕ್ಕೆ ಕಾರಣಗಳನ್ನು ತಿಳಿದುಕೊಂಡ್ರೆ ಪರಿಹಾರವನ್ನೂ ಸುಲಭವಾಗಿ ಕಂಡುಕೊಳ್ಳಬಹುದು.
ಆನುವಂಶಿಕತೆ: ಕೆಲವೊಮ್ಮೆ ಕುಟುಂಬದಲ್ಲಿ ಯಾರಿಗಾದರೂ ಆ ರೀತಿ ಡಬಲ್ ಚಿನ್ ಇದ್ದರೆ ನಮಗೂ ಬರುವ ಸಾಧ್ಯತೆ ಇರುತ್ತದೆ. ಇದನ್ನು ಆನುವಂಶಿಕತೆ ಎಂದು ಕರೆಯುತ್ತಾರೆ. ಹಾಗಿದ್ದಾಗ ನೀವು ಗಂಟೆಗಟ್ಟಲೆ ವ್ಯಾಯಾಮ ಮಾಡಿದರೂ ಡಬಲ್ ಚಿನ್ ಕಡಿಮೆಯಾಗುವುದಿಲ್ಲ. ಸಮಸ್ಯೆ ಜೆನೆಟಿಕ್ಸ್ ಹೌದೋ ಅಲ್ಲವೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.
ತೂಕ ಹೆಚ್ಚಳ: ತೂಕ ಹೆಚ್ಚಾದರೆ ಸಹಜವಾಗಿಯೇ ದವಡೆ ಸುತ್ತಲೂ ಕೊಬ್ಬು ಶೇಖರವಾಗಿ ಡಬಲ್ ಚಿನ್ ಕಾಣಿಸಿಕೊಳ್ಳುತ್ತದೆ. ಕೊಬ್ಬಿನ ಹೆಚ್ಚಳದಿಂದಾಗಿ ಚರ್ಮ ಹಿಗ್ಗಿಕೊಳ್ಳುತ್ತದೆ.
ವಯಸ್ಸು : ವಯಸ್ಸಾದಂತೆ ಕಾಲಜನ್ ದುರ್ಬಲಗೊಳ್ಳುತ್ತದೆ. ಇದರಿಂದ ಕುತ್ತಿಗೆಯ ಸುತ್ತ ಬೊಜ್ಜು ಬಂದು ಕತ್ತಿನ ಚರ್ಮ ಸಡಿಲವಾಗುತ್ತದೆ. ಇದು ಕೂಡ ಡಬಲ್ ಚಿನ್‌ಗೆ ಕಾರಣವಾಗಬಹುದು.
ಡಬಲ್ ಚಿನ್ ಕಡಿಮೆ ಮಾಡುವುದು ಹೇಗೆ ?
ಡಬಲ್ ಚಿನ್ ಕಡಿಮೆ ಮಾಡಿಕೊಳ್ಳಲು ಕೆಲವೊಂದು ಯೋಗಾಸನ ಅಥವಾ ವ್ಯಾಯಾಮ ಮಾಡಬೇಕು. ನಿಮ್ಮ ಬಾಯಿಯ ಕೆಳಭಾಗದಲ್ಲಿ ನಾಲಿಗೆಯನ್ನು ಒತ್ತುವ ಮೂಲಕ ತಲೆಯನ್ನು ಹಿಂದಕ್ಕೆ ಮತ್ತು ಮುಂದಕ್ಕೆ ತಿರುಗಿಸಬೇಕು.
ನಿಯಮಿತವಾಗಿ ಈ ವ್ಯಾಯಾಮ ಮಾಡುತ್ತ ಬಂದರೆ ಡಬಲ್ ಚಿನ್ ಮಾಯವಾಗುತ್ತದೆ. ಸೈಡ್ ನೆಕ್ ಸ್ಟ್ರೆಚ್ ಕೂಡ ಡಬಲ್ ಚಿನ್‌ಗೆ ಉತ್ತಮ ಪರಿಹಾರ ನೀಡಬಲ್ಲದು. ನೇರವಾಗಿ ಕುಳಿತುಕೊಳ್ಳಿ ಮತ್ತು ನಿಮ್ಮ ಕುತ್ತಿಗೆಯನ್ನು ಸಾಧ್ಯವಾದಷ್ಟು ಬಗ್ಗಿಸಿ. ಈ ಯೋಗದಿಂದ ಡಬಲ್ ಚಿನ್ ನಿಂದ ಮುಕ್ತಿ ಪಡೆಯಬಹುದು. ಈ ಯೋಗವನ್ನು ದಿನಕ್ಕೆ 10 ಅಥವಾ 15 ಬಾರಿ ಮಾಡಿ.