ಬೆಂಗಳೂರು: ಠೇವಣಿದಾರರನ್ನು ವಂಚಿಸುವ ಬ್ಯಾಂಕ್ ಅಧಿಕಾರಿಗಳನ್ನು ಜಾಮೀನು ರಹಿತ ಪ್ರಕರಣದಲ್ಲಿ ಬಂಧಿಸುವ ನಿಟ್ಟಿನಲ್ಲಿ ತಿದ್ದುಪಡಿ ವಿಧೇಯಕವನ್ನು ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕರಡು ಸಿದ್ಧಪಡಿಸಿದೆ.
ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ 2004ನ್ನುತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದ್ದು, ತಿದ್ದುಪಡಿ ವಿಧೇಯಕ 2022ರ ಕರಡು ಸಿದ್ಧಪಡಿಸಿದ್ದು, ಈ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಲಿದೆ.
ಈ ವಿಧೇಯಕ ಮಂಡನೆಯಾದಲ್ಲಿ ಹಣಕಾಸು ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಠೇವಣಿದಾರರಿಗೆ ವಂಚನೆ ಮಾಡುವ ಬ್ಯಾಂಕ್, ಸಂಸ್ಥೆಗಳ ಮುಖ್ಯಸ್ಥರು, ನಿರ್ದೇಶಕರ ವಿರುದ್ಧ ಪ್ರಕರಣಗಳಲ್ಲಿನ ಅಪರಾಧವು ಇನ್ನು ಮುಂದೆ ಜಾಮೀನು ರಹಿತ ಎಂದು ಪರಿಗಣಿಸಲ್ಪಡಲಿದೆ.
ಅಲ್ಲದೇ ದಂಡ ಸಂಹಿತೆ 1973ರ ಅಡಿಯಲ್ಲಿ ಯಾವ ವಿಚಾರಣೆಗಾಗಿ ದೋಷಾರೋಪಿಸಲಾಗಿದೆಯೋ ಅಂತಹ ಅಪರಾಧ ಅಧಿವಿಚಾರಣೆಯನ್ನು ನಡೆಸಲು ವಿಶೇಷ ನ್ಯಾಯಾಲಯ ಅಥವಾ ಯಾವುದೇ ಇತರೆ ವಿಶೇಷ ನ್ಯಾಯಾಲಯಕ್ಕೆ ಆಧ್ಯಾದೇಶವನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.