ಠಾಣೆ ಆವರಣದಲ್ಲಿ ಬೆಳೆಸಿದ್ದ ಗಿಡಗಳನ್ನು ಎರಡು ಹಸುಗಳು ತಿಂದು ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅವುಗಳನ್ನು ಠಾಣೆಯ ಆವರಣದಲ್ಲೇ ರಾತ್ರಿಯವರೆಗೆ ಕಟ್ಟಿಹಾಕಿದ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದಿದೆ.
ನೆಹರು ನಗರದಲ್ಲಿನ ಪೊಲೀಸ್ ಠಾಣೆ ಆವಣದಲ್ಲಿ ಬೆಳೆಸಿದ್ದ ಗಿಡಗಳನ್ನು ಈ ಹಸುಗಳು ತಿಂದು ಹಾಕಿದ್ದವು. ಹೀಗಾಗಿ ಸರ್ಕಲ್ ಇನ್ಸ್ಪೆಕ್ಟರ್ ಯೋಗೀಶ್ ಅವರ ನಿರ್ದೇಶನದಂತೆ ಸಿಬ್ಬಂದಿ ಅವುಗಳನ್ನು ಕಟ್ಟಿ ಹಾಕಿದ್ದರು.
ಸಂಜೆಯಾದರೂ ಹಸುಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಇವುಗಳ ಮಾಲೀಕರಾದ ಸಿಂಗಮ್ಮ, ಸಿದ್ದಮ್ಮ ಹುಡುಕಿಕೊಂಡು ಬಂದಿದ್ದು, ಠಾಣೆಯ ಆವರಣದಲ್ಲಿ ಹಸು ಕಟ್ಟಿ ಹಾಕಿದ್ದನ್ನು ನೋಡಿದ್ದಾರೆ. ಹಾಲು ಕರಿಯಬೇಕಿದೆ ಹೀಗಾಗಿ ಅವುಗಳನ್ನು ಬಿಡಿ ಎಂದು ಮನವಿ ಮಾಡಿದರೂ ಬಹಳಷ್ಟು ಸಮಯ ಸ್ಪಂದಿಸಲಿಲ್ಲ ಎಂದು ಹೇಳಲಾಗಿದೆ.
ಬಳಿಕ ರಾತ್ರಿ 10.30 ರ ಸುಮಾರಿಗೆ ಇನ್ನೊಮ್ಮೆ ಹಸುಗಳನ್ನು ರಸ್ತೆಗೆ ಬಿಡದಂತೆ ಮಾಲೀಕರಿಗೆ ಎಚ್ಚರಿಕೆ ನೀಡಿ ಅವುಗಳನ್ನು ಬಿಟ್ಟು ಕಳುಹಿಸಲಾಗಿದೆ.