ಯಾವುದಾದರೂ ಬೇಡಿಕೆ ಇಟ್ಟುಕೊಂಡ ಸಂದರ್ಭದಲ್ಲಿ ದೇವರಿಗೆ ಹರಕೆ ಹೊರುವುದು ವಾಡಿಕೆ. ಆದರೆ ಈ ರೀತಿ ಹರಕೆ ಹೊತ್ತ ಹಾಸನದ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು, ತಮ್ಮ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿದ್ದ ಕಾರಣಕ್ಕೆ ಚಿಂತಿತರಾಗಿದ್ದ ಈ ಠಾಣೆಯ ಪೊಲೀಸ್ ಸಿಬ್ಬಂದಿ ಇದರ ನಿವಾರಣೆಗೆ ಕೋಳಿ ಬಲಿ ಕೊಡಲು ತೀರ್ಮಾನಿಸಿದ್ದಾರೆ.
ಈ ರೀತಿ ಮೂಢನಂಬಿಕೆಗೆ ಮೊರೆ ಹೋಗಿ ಠಾಣೆಯಲ್ಲಿ ಕೋಳಿ ಬಲಿ ಕೊಟ್ಟ ಪ್ರಕರಣ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈಗ ಸರಕಾರಿ ಕಚೇರಿಯಲ್ಲಿ ಪ್ರಾಣಿ ಬಲಿ ನಿಷೇಧ ಕಾಯ್ದೆ ಉಲ್ಲಂಘಿಸಿದ ಕಾರಣಕ್ಕೆ ಸಬ್ ಇನ್ಸ್ಪೆಕ್ಟರ್ ಸೇರಿ ನಾಲ್ವರ ಸಿಬ್ಬಂದಿಗೆ ನೂತನ ಎಸ್ಪಿ ಹರಿರಾಮ್ ನೋಟಿಸ್ ನೀಡಿದ್ದು, ನಿಮ್ಮ ಮೇಲೆ ಏಕೆ ಶಿಸ್ತುಕ್ರಮ ಜರುಗಿಸಬಾರದು ಎಂದು ಅದರಲ್ಲಿ ಪ್ರಶ್ನಿಸಿದ್ದಾರೆ.