ವಿಶ್ವದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಟೆಸ್ಲಾ ಕಂಪನಿ ಸಿಇಓ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ Twitter Inc. ಖರೀದಿಸಲು ತೀವ್ರ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಟ್ವಿಟ್ಟರ್ ನಲ್ಲಿ ಎಲಾನ್ ಮಸ್ಕ್ ಶೇ.9 ಕ್ಕಿಂತ ಅಧಿಕ ಷೇರುಗಳನ್ನು ಹೊಂದಿದ್ದು, ಇದೀಗ ಸಂಪೂರ್ಣ ಮಾಲೀಕತ್ವ ಬಯಸಿದ್ದು, ಇದಕ್ಕಾಗಿ 54.20 ಶತಕೋಟಿ ಡಾಲರ್ ಆಫರ್ ನೀಡಿದ್ದಾರೆ. ಟ್ವಿಟ್ಟರ್ ಕಂಪನಿಯ ಸದ್ಯದ ಮೌಲ್ಯ 43 ಶತಕೋಟಿ ಡಾಲರ್ ಗಳಾಗಿದ್ದು, ಇದು ಅತ್ಯುತ್ತಮ ಆಫರ್ ಎಂದು ಟೆಸ್ಲಾ ಇಂಕ್ ವಕ್ತಾರರು ಹೇಳಿದ್ದಾರೆ.
ಒಂದು ವೇಳೆ Twitter Inc. ಇದಕ್ಕೆ ಒಪ್ಪದಿದ್ದರೆ ಸಂಪೂರ್ಣ ಖರೀದಿಗಾಗಿ ಪ್ಲಾನ್ ಬಿ ಕಾರ್ಯಗತಗೊಳಿಸುವುದಾಗಿ ಎಲಾನ್ ಮಸ್ಕ್ ಅವರ ಕಂಪನಿ ಹೇಳಿಕೊಂಡಿದೆ. ಆದರೆ ಪ್ಲಾನ್ ಬಿ ಯಾವುದೆಂಬುದನ್ನು ಹೇಳಿಲ್ಲ. ಆದರೆ ಎಲಾನ್ ಮಸ್ಕ್ ಅವರ ಆಫರ್ ಕುರಿತು ನಿರಾಸಕ್ತಿ ಹೊಂದಿರುವ Twitter Inc. ಮತ್ತೊಂದು ಪ್ಲಾನ್ ಮಾಡಿದ್ದು, ಯಾರಾದರೂ ಶೇ.15 ರಷ್ಟು ಷೇರುಗಳನ್ನು ಪಡೆದುಕೊಂಡರೆ ಅದು ಒಂದು ವರ್ಷದವರೆಗೆ ಮಾತ್ರ ಮಾನ್ಯವಾಗಲಿದೆ ಎಂಬ ತೀರ್ಮಾನವನ್ನು ಕೈಗೊಂಡಿದೆ ಎನ್ನಲಾಗಿದೆ. ಅದರ ಜೊತೆಗೆ ಷೇರುದಾರರಿಗೆ ಪ್ರೀಮಿಯಂ ಸಹ ನೀಡಬೇಕೆಂದು ಸೂಚಿಸಲಾಗಿದೆ.
ಮುಕ್ತ ಮಾರುಕಟ್ಟೆಯ ಸಂಗ್ರಹಣೆಯ ಮೂಲಕ ಟ್ವಿಟರ್ ಮೇಲೆ ನಿಯಂತ್ರಣ ಹೊಂದಲು ಎಲಾನ್ ಮಸ್ಕ್ ಪ್ರಯತ್ನಿಸಬಹುದು ಎಂಬ ಕಾರಣಕ್ಕೆ Twitter Inc. ಆಡಳಿತ ಮಂಡಳಿ ಈ ತೀರ್ಮಾನವನ್ನು ಕೈಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಟ್ವಿಟರ್ ಮತ್ತು ಅದರ ಷೇರುದಾರರ ಹಿತದೃಷ್ಟಿಯಿಂದ ಮುಕ್ತ ಮಾರುಕಟ್ಟೆಯ ಸಂಗ್ರಹಣೆ ಮೂಲಕ ಷೇರುಗಳ ಖರೀದಿಗೆ ಯಾರಾದರೂ ಮುಂದಾದರೆ ಅದನ್ನು ಕಂಪನಿ ತಡೆಯುವುದಿಲ್ಲವೆಂದು ತಿಳಿಸಿದೆ. ಆದರೆ Twitter Inc. ತೆಗೆದುಕೊಂಡಿರುವ ಈ ತೀರ್ಮಾನದಿಂದ ಟ್ವಿಟ್ಟರ್ ಮೇಲೆ ಸಂಪೂರ್ಣ ಸ್ವಾಮ್ಯತ್ವ ಹೊಂದುವ ಎಲಾನ್ ಮಸ್ಕ್ ಕನಸಿಗೆ ತಣ್ಣೀರೆರಿಚಿದಂತಾಗಿದೆ ಎಂಬ ಮಾತುಗಳು ಮಾರುಕಟ್ಟೆ ವಲಯದಲ್ಲಿ ಕೇಳಿ ಬರುತ್ತಿವೆ.