ಜೋಧ್‌ಪುರ: ಸೀಟ್ ಬೆಲ್ಟ್ ಹಾಕಿಲ್ಲ ಎಂಬ ಕಾರಣಕ್ಕೆ ಚಾಲಕನನ್ನು ತಡೆಯಲು ಯತ್ನಿಸಿದ ಟ್ರಾಫಿಕ್ ಪೇದೆಯೊಬ್ಬರನ್ನು ಅರ್ಧ ಕಿಲೋ ಮೀಟರ್‌ಗೂ ಹೆಚ್ಚು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದಿದೆ.
ಭಾನುವಾರ ನಡೆದ ಈ ಘಟನೆಯ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ ಪೇದೆ ತನ್ನ ಸಮತೋಲನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಚಾಲಕ ವೇಗವಾಗಿ ಬಿಳಿ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ನೋಡುಗರು ಪೊಲೀಸ್ ಪೇದೆಯನ್ನು ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋಗುವುದನ್ನು ನೋಡುತ್ತಾ ನಿಂತಿದ್ದಾರೆ.
ವರದಿ ಪ್ರಕಾರ, ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಚಾಲಕನಿಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದ ಟ್ರಾಫಿಕ್ ಪೊಲೀಸ್ ಪೇದೆಯನ್ನು 500-600 ಮೀಟರ್ ಗಳಷ್ಟು ದೂರ ಎಳೆದೊಯ್ದಿದ್ದಾನೆ ಎಂದು ವರದಿಯಾಗಿದೆ.
ಜೋಧ್‌ಪುರದ ದೇವನಗರ ಪೊಲೀಸ್ ಠಾಣೆಯ ಪ್ರಭಾರಿ ಜೈ ಕಿಶನ್ ಸೋನಿ ಅವರು, ಟ್ರಾಫಿಕ್ ಪೊಲೀಸ್ ಪೇದೆಯನ್ನು ಕಾರಿನ ಬಾನೆಟ್ ಮೇಲೆ ಎಳೆದಿರುವ ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ರು.