ವಾರಣಾಸಿಯ ಬಾರಗಾಂವ್‌ನಲ್ಲಿ 20 ವರ್ಷದ ಯುವಕನೊಬ್ಬ ಇತ್ತೀಚೆಗಷ್ಟೆ ಕೈಗಳ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ. ಅದಾಗಿ ಕೆಲವೇ ದಿನಗಳಲ್ಲಿ ಆತನಿಗೆ ವಿಪರೀತ ಜ್ವರ, ಸುಸ್ತು ಶುರುವಾಗಿತ್ತು. ಸಾಕಷ್ಟು ಚಿಕಿತ್ಸೆ ಪಡೆದ್ರೂ ಆರೋಗ್ಯ ಸುಧಾರಿಸದೇ ಇದ್ದಿದ್ರಿಂದ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ರು.
ಎಚ್‌ಐವಿ ಟೆಸ್ಟ್ ಪಾಸಿಟಿವ್ ಬಂದಿತ್ತು. ಆತ ಯಾರೊಂದಿಗೂ ದೈಹಿಕ ಸಂಬಂಧ ಹೊಂದಿರಲಿಲ್ಲ. ರಕ್ತವನ್ನು ಸಹ ಆತ ಪಡೆದಿರಲಿಲ್ಲ. ತನಗೆ ಎಚ್‌ಐವಿ ಬಂದಿದ್ಹೇಗೆ ಅನ್ನೋದು ಅವನಿಗೆ ಯಕ್ಷಪ್ರಶ್ನೆಯಾಗಿತ್ತು. ರಿಪೋರ್ಟ್ ನೋಡಿ ಯುವಕ ಆಘಾತಕ್ಕೊಳಗಾಗಿದ್ದ.
ಈ ವೇಳೆ ಆತ ಹಾಕಿಸಿಕೊಂಡಿದ್ದ ಟ್ಯಾಟೂವನ್ನು ವೈದ್ಯರು ಗಮನಿಸಿದ್ದಾರೆ. ಆ ಟ್ಯಾಟೂವಿನಿಂದ್ಲೇ ಎಚ್‌ಐವಿ ಬಂದಿದೆ ಅಂತಾ ಹೇಳಿದ್ದಾರೆ. ನಗ್ವಾನ್‌ನಲ್ಲೂ ಇದೇ ರೀತಿ ಟ್ಯಾಟೂ ಹಾಕಿಸಿಕೊಂಡ ಮಹಿಳೆಯೊಬ್ಬಳು ಅನಾರೋಗ್ಯಕ್ಕೀಡಾಗಿದ್ದಾಳೆ. ಪರೀಕ್ಷೆ ಮಾಡಿಸಿದಾಗ ಅವಳಿಗೂ ಎಚ್‌ಐವಿ ಪಾಸಿಟಿವ್ ಬಂದಿದೆ.
ಎಚ್‌ಐವಿ ಸೋಂಕಿತರಿಗೆ ಹಚ್ಚೆ ಹಾಕಲು ಬಳಸಿದ್ದ ಸೂಜಿಯಲ್ಲೇ ಇವರಿಗೆ ಸಹ ಟ್ಯಾಟೂ ಹಾಕಿದ್ದರಿಂದ ಈ ರೀತಿಯಾಗಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಟ್ಯಾಟೂ ಹಾಕಲು ಬಳಸುವ ಸೂಜಿ ಕೊಂಚ ದುಬಾರಿ. ನಿಯಮದ ಪ್ರಕಾರ ಒಬ್ಬರಿಗೆ ಟ್ಯಾಟೂ ಹಾಕಿದ ಬಳಿಕ ಆ ಸೂಜಿಯನ್ನು ಬಿಸಾಡಬೇಕು.
ಆದ್ರೆ ಹಣದಾಸೆಯಿಂದ ಒಂದೇ ಸೂಜಿಯಲ್ಲಿ ಎಲ್ಲರಿಗೂ ಹಚ್ಚೆ ಹಾಕಿದ್ರೆ ಈ ರೀತಿ ಎಚ್‌ಐವಿ ಹರಡುತ್ತದೆ ಅಂತಾ ವೈದ್ಯರು ಸ್ಪಷ್ಟಪಡಿಸಿದ್ದಾರೆ. ನೀವೇನಾದ್ರೂ ಟ್ಯಾಟೂ ಹಾಕಿಸಿಕೊಳ್ಳಲು ಬಯಸಿದ್ರೆ ಹೊಸ ಸೂಜಿಯನ್ನು ಬಳಸಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಟ್ಯಾಟೂ ಹಾಕಿಸಿಕೊಂಡ ಬಳಿಕ ಒಮ್ಮೆ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಅಕಸ್ಮಾತ್ ಪಾಸಿಟಿವ್ ಬಂದರೆ ಕೂಡಲೇ ಚಿಕಿತ್ಸೆ ಆರಂಭಿಸಬಹುದು ಅನ್ನೋದು ವೈದ್ಯರ ಸಲಹೆ.