ಟೋಲ್ ಕಂಪನಿಗಳಿಗೆ ಹಣ ಕಟ್ಟಿ ಕಟ್ಟಿ ಪ್ರಯಾಣಿಕರು ಹೈರಾಣಾಗ್ತಾರೆ. ಆದ್ರೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಟ್ರಕ್ ಚಾಲಕನೊಬ್ಬ ಟೋಲ್ ಟ್ಯಾಕ್ಸ್ ನೋಡಿ ಅಕ್ಷರಶಃ ಆಘಾತಕ್ಕೊಳಗಾಗಿದ್ದಾನೆ. ಟೋಲ್ ಟ್ಯಾಕ್ಸ್ ಹೆಸರಿನಲ್ಲಿ ಆತನ ಬ್ಯಾಂಕ್ ಖಾತೆಯಿಂದ 57 ಸಾವಿರ ಡಾಲರ್ ಅಂದ್ರೆ ಸುಮಾರು 43 ಲಕ್ಷ ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ.
ನ್ಯೂ ಸೌತ್ ವೇಲ್ಸ್‌ನ ಟೋಲ್ ರಸ್ತೆಯ ಮೂಲಕ ಈತ ಹಾದು ಹೋಗುತ್ತಿದ್ದ. ಒಮ್ಮೆಯಂತೂ ಟೋಲ್ ಏಜೆನ್ಸಿ ಆತನ ಬಳಿಯಿಂದ ಒಮ್ಮೆಲೇ 13 ಲಕ್ಷ ರೂಪಾಯಿ ಟೋಲ್ ವಸೂಲಿ ಮಾಡಿತ್ತು. ಸಿಡ್ನಿಯಲ್ಲಿ ನೆಲೆಸಿರುವ ಈ ಟ್ರಕ್ ಚಾಲಕ ಜೇಸನ್ ಕ್ಲೆಂಟನ್ ಖಾತೆಯಿಂದ ಪ್ರತಿ ಬಾರಿ ಸುಮಾರು 75 ಸಾವಿರ ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ. ಒಟ್ಟಾರೆ 57 ಸಾವಿರ ಡಾಲರ್ (43 ಲಕ್ಷ ರೂಪಾಯಿ) ಹಣವನ್ನು ಟೋಲ್ ಏಜೆನ್ಸಿ ಕಡಿತ ಮಾಡಿದೆ.
ಆದ್ರೆ ಈ ಬಗ್ಗೆ ಪ್ರಶ್ನಿಸಿದ್ರೆ ಹಣವನ್ನು ಮರಳಿಸಲು ಏಜೆನ್ಸಿ ಒಪ್ಪಲೇ ಇಲ್ಲ. ಇದೀಗ ಕ್ರೆಡಿಟ್ ನೋಟ್ ಮೂಲಕ ಅದನ್ನು ಮರಳಿಸುವುದಾಗಿ ಭರವಸೆ ನೀಡಿದೆ. 45,000 ಇ-ಟೋಲ್ ಬಳಕೆದಾರರಲ್ಲಿ ಜೇಸನ್ ಕೂಡ ಒಬ್ಬರು. ನಿಯಮಿತವಾಗಿ ಟೋಲ್ ರಸ್ತೆ ಬಳಸದೇ ಇದ್ದಿದ್ದಕ್ಕಾಗಿ ಅಧಿಕ ಶುಲ್ಕ ವಿಧಿಸಿದ್ದಾರೆ. ಕಂಪನಿಯ ತಪ್ಪಿನಿಂದಾಗಿ ಟೋಲ್ ಟ್ಯಾಕ್ಸ್ ಹೆಸರಿನಲ್ಲಿ ಜೇಸನ್ ಕ್ಲಾಂಟನ್ ಖಾತೆಯಿಂದ ಭಾರಿ ಮೊತ್ತ ಕಡಿತವಾಗುತ್ತಲೇ ಇತ್ತು.
ಇದನ್ನು ಮನಗಂಡ ಅವರು ತಕ್ಷಣವೇ ತಮ್ಮ ಟೋಲ್ ಖಾತೆಯನ್ನು ಕ್ಲೋಸ್ ಮಾಡಿದ್ದಾರೆ. ಆದ್ರೆ ಅಷ್ಟರಲ್ಲಾಗ್ಲೇ ಭಾರೀ ಮೊತ್ತ ಕಡಿತಗೊಂಡು ಏಜೆನ್ಸಿ ಪಾಲಾಗಿತ್ತು. ಈ ಘಟನೆಯ ಬಗ್ಗೆ ಸಾರಿಗೆ ಸಚಿವೆ ನಟಾಲಿ ವಾರ್ಡ್ ಕೂಡ ಕ್ಷಮೆಯಾಚಿಸಿದ್ದಾರೆ. ಇಂತಹ ಪ್ರಮಾದ ನಡೆಯಬಾರದಿತ್ತು ಅಂತಾ ವಿಷಾದ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಜೇಸನ್ ಸೇರಿದಂತೆ ಯಾರ್ಯಾರ ಖಾತೆಯಿಂದ ಹೆಚ್ಚುವರಿ ಹಣ ಕಡಿತಗೊಂಡಿದೆಯೋ ಅದೆಲ್ಲವೂ ಮರುಪಾವತಿ ಆಗಲಿದೆ ಅಂತಾ ಭರವಸೆ ನೀಡಿದ್ದಾರೆ.