ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳ ಬಂಗಾರದ ಬೇಟೆ ಮುಂದುವರೆದಿದೆ. ಈ ಕ್ರೀಡಾಕೂಟದಲ್ಲಿ ಭಾರತೀಯರು ಈಗಾಗಲೇ ಮೂರು ಚಿನ್ನ ಸೇರಿದಂತೆ ಒಟ್ಟು 6 ಪದಕಗಳನ್ನು ಗೆದ್ದಿದ್ದು, ಚಿನ್ನ ಗೆದ್ದವರ ಪೈಕಿ 20ರ ಹರೆಯದ ಅಚಿಂತ್ ಶೆಯುಲಿ ಕೂಡ ಒಬ್ಬರು.
ಅಚಿಂತ್, ಪುರುಷರ 73 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದು ಇವರು ಒಟ್ಟು 313 ಕೆಜಿ ತೂಕ ಎತ್ತಿದ್ದಾರೆ. ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಏರಿಸಿರುವುದಕ್ಕೆ ಅಚಿಂತ್ ಅವರಿಗೆ ಅಭಿನಂದನೆಗಳ ಸುರಿಮಳೆಯೇ ಹರಿದು ಬಂದಿದೆ.
ಮೂಲತಃ ಪಶ್ಚಿಮ ಬಂಗಾಳದವರಾದ ಅಚಿಂತ್, ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ್ದು, ತಮ್ಮ ತಂದೆ ನಿಧನರಾದ ಬಳಿಕ ಕುಟುಂಬದ ಹೊಣೆ ಹೊತ್ತ ಅಣ್ಣನಿಗೆ ಹೆಗಲು ಕೊಟ್ಟಿದ್ದರು. ಟೈಲರ್ ಕೆಲಸ ಮಾಡುತ್ತಿದ್ದ ಅಣ್ಣ ಹೊಲೆದ ಬಟ್ಟೆಗಳಿಗೆ ಬಟನ್ ಹಾಕುವುದು, ಐರನ್ ಮಾಡುವುದು ಸೇರಿದಂತೆ ಹಲವು ಕೆಲಸಗಳನ್ನು ಅಚಿಂತ್ ಮಾಡುತ್ತಿದ್ದರು.
ಇದರ ಮಧ್ಯೆ ಜಿಮ್ ಗೆ ತೆರಳಿ ಅಚಿಂತ್ ಕಸರತ್ತು ಮಾಡುತ್ತಿದ್ದು, ಇದನ್ನು ಗಮನಿಸಿದ ಅವರ ಅಣ್ಣ, ವೇಟ್ ಲಿಫ್ಟಿಂಗ್ ನತ್ತ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದ್ದರು. ಅದರಂತೆ ಪರಿಣಿತರಿಂದ ತರಬೇತಿ ಪಡೆದ ಅಚಿಂತ್ ಇಂದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.