ಮೊಟ್ಟೆ ಇದ್ದರೆ ಆಮ್ಲೇಟ್ ಮಾಡಿಕೊಂಡು ತಿನ್ನುವುದು ಎಂದರೆ ಎಲ್ಲರಿಗೂ ಇಷ್ಟ. ಇನ್ನು ಕೆಲವರು ಬೇಯಿಸಿಕೊಂಡು ತಿನ್ನುತ್ತಾರೆ.
ಆದರೆ ಇದರಲ್ಲಿ ರುಚಿಕರವಾದ ಎಗ್ ಫ್ರೈ ಮಸಾಲ ಮಾಡಿಕೊಂಡು ತಿಂದರೆ ಊಟ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಅಷ್ಟು ರುಚಿಕರವಾಗಿರುತ್ತದೆ ಈ ಎಗ್ ಫ್ರೈ ಮಸಾಲ.
ಬೇಕಾಗುವ ಸಾಮಾಗ್ರಿಗಳು: 3 ಮೊಟ್ಟೆ, ½ ಟೀ ಸ್ಪೂನ್ ಸಾಸಿವೆ, ಕರಿಬೇವು ಸ್ವಲ್ಪ, 1 ಟೇಬಲ್ ಸ್ಪೂನ್ ಕೆಂಪು ಮೆಣಸಿನ ಪುಡಿ, ಚಿಟಿಕೆ ಅರಿಶಿನ, ಚಿಟಿಕೆ ಹಿಂಗು, 2 ಟೇಬಲ್ ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಅದರ ಸಿಪ್ಪೆಯನ್ನೆಲ್ಲಾ ತೆಗೆದು ಇಡಿ. ನಂತರ ಮೊಟ್ಟೆಯನ್ನು ನಾಲ್ಕು ಭಾಗವಾಗಿ ಉದ್ದಕೆ ಸೀಳಿ ಕೊಳ್ಳಿ.
ಒಂದು ಪ್ಯಾನ್ ಗೆ ಎಣ್ಣೆ ಹಾಕಿ. ಅದು ಬಿಸಿಯಾದ ಕೂಡಲೆ ಸಾಸಿವೆ ಹಾಕಿ, ಇಂಗು ಹಾಕಿ ನಂತರ ಕರಿಬೇವು ಸೊಪ್ಪು ಹಾಕಿ. ಆಮೇಲೆ ಅರಿಶಿನ, ಉಪ್ಪು, ಖಾರದ ಪುಡಿ ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ಬೇಯಿಸಿಕೊಂಡ ಮೊಟ್ಟೆಯನ್ನು ಅದಕ್ಕೆ ಸೇರಿಸಿಕೊಂಡು ಫ್ರೈ ಮಾಡಿಕೊಂಡರೆ ರುಚಿಕರವಾದ ಮೊಟ್ಟೆ ಮಸಾಲ ಫ್ರೈ ರೆಡಿ.