ಯಾವುದೇ ಉತ್ಪನ್ನ ಹಾಗೂ ಸೇವೆಗಳ ಬಗ್ಗೆ ಅತೃಪ್ತರಾದ್ರೆ ನೀವೇನು ಮಾಡುತ್ತೀರಿ..? ಗ್ರಾಹಕರ ವೇದಿಕೆಯಲ್ಲಿ ದೂರು ನೀಡುತ್ತೀರಿ ಅಥವಾ ಮರುಪಾವತಿಗೆ ಬೇಡಿಕೆ ಇಡಬಹುದು ಅಲ್ವಾ..? ಆದರೆ, ಇಲ್ಲೊಬ್ಬ ಟೆಸ್ಲಾ ಸೇವೆಯಿಂದ ಅತೃಪ್ತಿ ಹೊಂದಿದ ಗ್ರಾಹಕ ಕಾರನ್ನೇ ಸ್ಫೋಟಿಸಿದ್ದಾನೆ..!
ಹೌದು, ಕಾರು ಕಂಪನಿಯ ಸೇವೆಯಿಂದ ಅತೃಪ್ತಿ ಹೊಂದಿದ ಫಿನ್‌ಲ್ಯಾಂಡ್‌ನ ವ್ಯಕ್ತಿಯೊಬ್ಬ ತನ್ನ 2013ರ ಟೆಸ್ಲಾ ಮಾಡೆಲ್ ಎಸ್ ನಲ್ಲಿ ಎಲೋನ್ ಮಸ್ಕ್ ಹೋಲುವ ಗೊಂಬೆಯನ್ನಿಟ್ಟು, ಕಾರಿನಲ್ಲಿ 30 ಕೆ.ಜಿ. ಡೈನಮೈಟ್ ತುಂಬಿ ಸ್ಫೋಟಿಸಿದ್ದಾನೆ.
ಕ್ಯಾಟೈನೆನ್ ಎಂಬಾತನ ಎಲೆಕ್ಟ್ರಿಕ್ ಸೆಡಾನ್ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಬಗ್ಗೆ ಸರಿ ಮಾಡಿಕೊಡುವಂತೆ ಸರ್ವೀಸ್ ಸ್ಟೇಷನ್ ನಲ್ಲಿ ಕೇಳಿದಾಗ, ಸಂಪೂರ್ಣ ಬ್ಯಾಟರಿ ಪ್ಯಾಕ್ ಅನ್ನು ಬದಲಿಸಬೇಕಾಗುತ್ತದೆ. ಇದಕ್ಕೆ ಕನಿಷ್ಠ 20,000 ಯುರೋ ವೆಚ್ಚವಾಗುತ್ತದೆ ಎಂದು ಟೆಸ್ಲಾ ಹೇಳಿದೆ. ಕಾರು ಸುಮಾರು ಎಂಟು ವರ್ಷ ಹಳೆಯದಾದ ಕಾರಣ ಅದಕ್ಕೆ ಯಾವುದೇ ವಾರಂಟಿ ಲಭ್ಯವಿರಲಿಲ್ಲ. ಹೀಗಾಗಿ ಕಾರನ್ನು ಸ್ಫೋಟಿಸಲು ಕ್ಯಾಟೈನೆನ್ ನಿರ್ಧರಿಸಿದ್ದರು.
ಸ್ಫೋಟದಲ್ಲಿ ಕಾರು ಸಂಪೂರ್ಣವಾಗಿ ನಾಶವಾಗಿದ್ದು, ಫಲಿತಾಂಶದಿಂದ ಕಾರಿನ ಮಾಲೀಕ ಕ್ಯಾಟೈನೆನ್ ತೃಪ್ತರಾಗಿದ್ದಾರೆ. ಬಹುಶಃ ಟೆಸ್ಲಾ ಕಾರನ್ನು ಸ್ಫೋಟಿಸಿದ ವಿಶ್ವದ ಮೊದಲ ವ್ಯಕ್ತಿ ತಾನೇ ಆಗಿರಬಹುದು ಎಂದು ಹೇಳಿದ್ದಾನೆ.
ಯೂಟ್ಯೂಬ್ ಚಾನೆಲ್ ಪೊಮ್ಮಿಜಟ್ಕಾಟ್‌ನ ಸಿಬ್ಬಂದಿ ಕೆಲವು ಸ್ವಯಂಸೇವಕರ ಸಹಾಯದಿಂದ ಕಾರನ್ನು ಸ್ಫೋಟಗೊಳಿಸಲು ನೆರವಾಗಿದ್ದು, ಇದರ ಸಂಪೂರ್ಣ ದೃಶ್ಯ ಚಿತ್ರೀಕರಿಸಿ ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾಗಿದೆ.