ಜನಪ್ರಿಯ ಟೆಸ್ಲಾ ಕಂಪನಿ ಸುಮಾರು 1.1 ಮಿಲಿಯನ್ ಕಾರುಗಳನ್ನು ಹಿಂಪಡೆದಿದೆ. ಮಾಡೆಲ್ 3 ಎಲೆಕ್ಟ್ರಿಕ್ ವೆಹಿಕಲ್‌ಗಳಿವು. 2017 ರಿಂದ 2022ರ ನಡುವೆ ಈ ಕಾರುಗಳನ್ನು ತಯಾರಿಸಲಾಗಿತ್ತು.
2020-2021ರ ನಡುವೆ ಉತ್ಪಾದಿಸಲಾದ ಮಾಡೆಲ್ ವೈ ಕಾರುಗಳು, 2021-2022ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮಾಡೆಲ್ ಎಸ್ ಮತ್ತು ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ವೆಹಿಕಲ್‌ಗಳನ್ನು ಟೆಸ್ಲಾ ಹಿಂಪಡೆಯುತ್ತಿದೆ.
ಎಲೆಕ್ಟ್ರಿಕ್ ವೆಹಿಕಲ್‌ಗಳ ವಿಂಡೋ ರಿವರ್ಸಲ್ ಸಿಸ್ಟಂನಲ್ಲಿ ನ್ಯೂನ್ಯತೆ ಇರುವುದರಿಂದ ವಾಹನಗಳನ್ನು ಹಿಂಪಡೆಯುತ್ತಿರುವುದಾಗಿ ಟೆಸ್ಲಾ ಕಂಪನಿ ಅಮೆರಿಕದ ನ್ಯಾಶನಲ್ ಹೈವೆ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಶನ್‌ಗೆ ಮಾಹಿತಿ ನೀಡಿದೆ. ವಾಹನಗಳಲ್ಲಿ ತೊಂದರೆ ಕಂಡು ಬಂದಲ್ಲಿ ಅದನ್ನು ಸರಿಪಡಿಸಲು ಸಾಫ್ಟ್‌ವೇರ್ ಅಪ್ಡೇಟ್ ಒದಗಿಸುವುದಾಗಿಯೂ ಟೆಸ್ಲಾ ಭರವಸೆ ನೀಡಿದೆ.
ಕಿಟಕಿಗಳು ಆಟೋಮ್ಯಾಟಿಕ್ ಆಗಿ ಮುಚ್ಚಿಕೊಳ್ಳುವ ಸಂದರ್ಭದಲ್ಲಿ ತಪ್ಪಾಗಿ ಕೆಲವೊಂದು ಅಡೆತಡೆಗಳನ್ನು ಡಿಟೆಕ್ಟ್ ಮಾಡುತ್ತಿದೆ. ಪರಿಣಾಮ ವಾಹನ ಸವಾರರ ಕೈಬೆರಳುಗಳೇ ಕತ್ತರಿಸಿ ಹೋಗುವ ಅಪಾಯವಿದೆ, ಇನ್ನೂ ಭಯಾನಕವಾದ ತೊಂದರೆಯೂ ಆಗಬಹುದು.
ಟೆಸ್ಲಾ ಕಾರುಗಳಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಸಣ್ಣಪುಟ್ಟ ಪ್ರಮಾದಗಳಿಂದಾಗಿ ಕಾರುಗಳನ್ನು ಹಿಂಪಡೆಯಲಾಗಿತ್ತು. ವಿಶ್ವದ ಅತ್ಯಂತ ಶ್ರೀಮಂತ ಎನಿಸಿಕೊಂಡಿರೋ ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್, ಸಾಫ್ಟ್‌ವೇರ್ ಅಪ್ಡೇಟ್ ಮೂಲಕ ಈ ಸಮಸ್ಯೆ ಬಗೆಹರಿಯಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗಳಿಂದಾಗಿ ಅಮೆರಿಕದ ಮಾರುಕಟ್ಟೆಯಲ್ಲಿ ಟೆಸ್ಲಾ ಷೇರುಗಳ ಮೌಲ್ಯ ಇಳಿಕೆಯಾಗಿದೆ.