ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವೂ ಮಳೆಯಿಂದಾಗಿ ರದ್ದಾಗಿದೆ. ಪರಿಣಾಮ ಟೀಮ್ ಇಂಡಿಯಾ ಏಕದಿನ ಸರಣಿಯನ್ನು 0-1 ರಿಂದ ಸೋತಿದೆ. ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ 7 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.
ನಂತರ ಹ್ಯಾಮಿಲ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಮಳೆಯ ಕಾರಣಕ್ಕೆ ಮೂರನೇ ಏಕದಿನ ಪಂದ್ಯದಲ್ಲೂ ಫಲಿತಾಂಶ ಬಂದಿಲ್ಲ. ಹಾಗಾಗಿ ಭಾರತದ ಪಾಲಿಗೆ ವರುಣದೇವನೇ ವಿಲನ್ ಆಗಿದ್ದಾನೆ.
ಕ್ರೈಸ್ಟ್‌ಚರ್ಚ್‌ನಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಬೇಕಿತ್ತು. 220 ರನ್‌ಗಳ ಗುರಿ ಬೆನ್ನಟ್ಟಿದ ಆಥಿತೇಯರು 18 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 104 ರನ್ ಗಳಿಸಿದ್ದರು. ಅಷ್ಟರಲ್ಲಿ ಭಾರೀ ಮಳೆ ಸುರಿಯಲಾರಂಭಿಸಿದ್ದರಿಂದ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಭಾರತ ಏಕದಿನ ಸರಣಿಯನ್ನು 0-1 ಅಂತರದಿಂದ ಕಳೆದುಕೊಂಡಿದೆ.
ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವ ಮುನ್ನ ಡೆವೊನ್ ಕಾನ್ವೆ 38 ರನ್ ಗಳಿಸಿ ಆಡುತ್ತಿದ್ದರೆ, ನಾಯಕ ಕೇನ್ ವಿಲಿಯಮ್ಸನ್ ಖಾತೆ ತೆರೆದಿರಲಿಲ್ಲ. 57 ರನ್ ಗಳಿಸಿದ್ದ ಫಿನ್ ಅಲೆನ್ ಔಟಾಗಿದ್ದರು. ನಿಯಮದ ಪ್ರಕಾರ, ನ್ಯೂಜಿಲೆಂಡ್ ತಂಡವು ಭಾರತಕ್ಕಿಂತ 50 ರನ್‌ಗಳಿಂದ ಮುಂದಿತ್ತು, ಆದರೆ ಪಂದ್ಯವನ್ನು ಪೂರ್ಣಗೊಳಿಸಲು ಕನಿಷ್ಠ 20 ಓವರ್‌ಗಳನ್ನು ಆಡುವುದು ಅನಿವಾರ್ಯ. ಹಾಗಾಗಿ ಪಂದ್ಯ ರದ್ದಾಗಿದೆ. ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದರಿಂದ ಟೀಂ ಇಂಡಿಯಾ ಸೋಲು ಅನುಭವಿಸಿದೆ.