
ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಟೀಂ ಇಂಡಿಯಾ ಎಡವಿದೆ. ಆದ್ರೆ ಟೂರ್ನಿಯುದ್ದಕ್ಕೂ ಭಾರತದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡಿದ್ರು. ಹಾಗಾಗಿ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಸೂರ್ಯಕುಮಾರ್, T20 ವಿಶ್ವಕಪ್ 2022ರ ಸೂಪರ್ 12 ಸುತ್ತಿನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧ ಶತಕಗಳನ್ನು ಗಳಿಸಿದರು.
ಹಾಗಾಗಿ ಸೂರ್ಯಕುಮಾರ್ ವಿಶ್ವದ ನಂಬರ್-1 ಬ್ಯಾಟ್ಸ್‌ಮನ್ ಪಟ್ಟವನ್ನು ಅಲಂಕರಿಸಿದ್ದಾರೆ ಈ ಮೂಲಕ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಅನ್ನು ಸಹ ಅವರು ಪಡೆದಿದ್ದಾರೆ. ಐಸಿಸಿ ಪಟ್ಟಿಯಲ್ಲಿ ಅವರ ರೇಟಿಂಗ್ 869 ಇದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 14 ರನ್‌ಗಳಿಗೆ ಔಟಾಗಿ ಹತ್ತು ಅಂಕಗಳನ್ನು ಕಳೆದುಕೊಂಡಡೂ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸೂರ್ಯಕುಮಾರ್ ವಿಶ್ವಕಪ್‌ನಲ್ಲಿ 189.68 ಸ್ಟ್ರೈಕ್ ರೇಟ್‌ನಲ್ಲಿ 239 ರನ್ ಗಳಿಸಿದರು ಮತ್ತು ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು.
ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ 47 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿ 22 ಸ್ಥಾನ ಮೇಲೇರಿ 12ನೇ ಸ್ಥಾನಕ್ಕೆ ತಲುಪಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಒಂದು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾದ ರಿಲೆ ರೊಸ್ಸೊ ಏಳನೇ ಸ್ಥಾನಕ್ಕೆ ಏರಿದರೆ, ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ 8ನೇ ಸ್ಥಾನಕ್ಕೆ ಕುಸಿದರು. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಎರಡನೇ ಸ್ಥಾನದಲ್ಲಿ ಮತ್ತು ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಐದನೇ ಸ್ಥಾನದಲ್ಲಿ ಮುಂದುವರಿದರೆ, ಡೆವೊನ್ ಕಾನ್ವೇ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬೌಲರ್‌ಗಳ ಪೈಕಿ ಇಂಗ್ಲೆಂಡ್‌ನ ಆದಿಲ್ ರಶೀದ್ ಐದು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಮತ್ತು ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಮ್ಯಾನ್ ಆಫ್ ದಿ ಸಿರೀಸ್ ಮತ್ತು ಫೈನಲ್‌ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಸ್ಯಾಮ್ ಕರ್ರಾನ್ ಎರಡು ಸ್ಥಾನ ಮೇಲೇರಿ ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗಾ ಅಗ್ರಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನದ ರಶೀದ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಪೈಕಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅಗ್ರಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಎರಡನೇ ಮತ್ತು ಭಾರತದ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನದಲ್ಲಿದ್ದಾರೆ.