ಪಾಕಿಸ್ತಾನ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಬಗ್ಗುಬಡಿದ ಪಾಕ್ ಪಡೆ ಫೈನಲ್ ಪ್ರವೇಶಿಸಿದೆ. ಪಾಕಿಸ್ತಾನ ಫೈನಲ್ ತಲುಪಿರುವುದರಿಂದ ಟೀಂ ಇಂಡಿಯಾ ಚಾಂಪಿಯನ್ ಆಗುವ ಭರವಸೆಯೂ ಹೆಚ್ಚಿದೆ.
2007 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ ಕಪ್ ಗೆದ್ದುಕೊಂಡಿತ್ತು. ಈ ಬಾರಿ ಪಾಕ್ ಜೊತೆ ಮುಖಾಮುಖಿಯಾಗಲು ಸೆಮಿಫೈನಲ್‌ನಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ ಗೆಲ್ಲಬೇಕಿದೆ.
ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಪಾಕ್ ಬೌಲರ್‌ಗಳ ಕಟ್ಟುನಿಟ್ಟಿನ ದಾಳಿಯಿಂದಾಗಿ ಕಿವೀಸ್ 4 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಲು ಸಫಲವಾಯ್ತು. ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ 35 ಎಸೆತಗಳಲ್ಲಿ ಔಟಾಗದೆ 53 ಹಾಗೂ ನಾಯಕ ಕೇನ್ ವಿಲಿಯಮ್ಸನ್ 42 ಎಸೆತಗಳಲ್ಲಿ 46 ರನ್ ಗಳಿಸಿದ್ರು. ಗ್ರೂಪ್ ಹಂತದಲ್ಲಿ ಅಷ್ಟಕ್ಕಷ್ಟೆ ಎಂಬಂತಿದ್ದ ಪಾಕಿಸ್ತಾನ ತಂಡ, ಸೆಮಿಫೈನಲ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಹಾಗೂ ಚುರುಕಿನ ಫೀಲ್ಡಿಂಗ್ ಮೂಲಕ ನ್ಯೂಜಿಲೆಂಡ್ ಅನ್ನು ಕಟ್ಟಿಹಾಕಿದೆ.
ಪಾಕಿಸ್ತಾನದ ಆರಂಭಿಕರಾದ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್, 100ಕ್ಕೂ ಅಧಿಕ ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಬಾಬರ್ ಅಜಮ್ 42 ಎಸೆತಗಳಲ್ಲಿ 53 ರನ್ ಗಳಿಸಿದರು. ಈ ಬಾರಿಯ ವಿಶ್ವಕಪ್‌ನಲ್ಲಿ ಇದು ಅವರ ಮೊದಲ ಅರ್ಧಶತಕ. ಮೊಹಮ್ಮದ್ ರಿಜ್ವಾನ್ 43 ಎಸೆತಗಳಲ್ಲಿ 57 ರನ್ ಗಳಿಸಿದರು.
ಭಾರತ-ಇಂಗ್ಲೆಂಡ್ ಮಧ್ಯೆ 2ನೇ ಸೆಮಿಫೈನಲ್ ಪಂದ್ಯ
ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ನವೆಂಬರ್ 10 ರಂದು ಅಡಿಲೇಡ್ ಓವಲ್‌ನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನವೆಂಬರ್ 13 ರಂದು ಪಾಕಿಸ್ತಾನದ ವಿರುದ್ಧ ಫೈನಲ್‌ನಲ್ಲಿ ಸೆಣೆಸಲಿದೆ. ಭಾರತ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಈವರೆಗೆ ತಲಾ ಒಂದೊಂದು ಬಾರಿ ಟಿ20 ವಿಶ್ವಕಪ್ ಗೆದ್ದುಕೊಂಡಿವೆ.